ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿ ಜಾರಿಗೆ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ ಆಗ್ರಹ

Published

on

ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿರುವುದೇ ಆದರೆ, ನಾಳಿನ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಗೆ ತಾತ್ವಿಕವಾಗಿ ಒಪ್ಪಿಕೊಳ್ಳಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಹಿರಿಯ ನಾಯಕ ಆರ್. ಮೋಹನ್ ರಾಜ್ ಒತ್ತಾಯಿಸಿದರು.

 

 

 

 

 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಅವರು, “ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಪ್ರತಿಪಾದಿಸಿದ್ದರು” ಎಂದರು.

ಕಾಂಗ್ರೆಸ್ ಸರ್ಕಾರ ಎಸ್‌.ಎಂ ಕೃಷ್ಣ ಅವಧಿಯಲ್ಲಿ ಆಯೋಗ ರಚಿಸಿದೆ. ಕಳೆದ ಮೂವತ್ತು ವರ್ಷಗಳಿಂದ ಚಳವಳಿ ಮಾಡುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಲ್ಲ.  ಜನಸಂಖ್ಯೆ ಆಧಾರದಲ್ಲಿ ಪಾಲು ಸಿಗಬೇಕು ಎಂಬುವುದು ಕಾನ್ಶಿರಾಮ್ ಆಶಯವಾಗಿತ್ತು. ಎಲ್ಲಾ ಸಮುದಾಯಗಳು ಮೇಲೆ ಬರಬೇಕು ಎಂಬುವುದು ಬಹುಜನ ಚಳವಳಿಯ ಆಶಯವೂ ಹೌದು ಎಂದು ಹೇಳಿದರು.

 

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಈ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಿದೆ. ಪರಿಶಿಷ್ಟರ ನಿಧಿಯನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಸಾಮಾಜಿಕ ನ್ಯಾಯದಲ್ಲಿ ಅಹಿಂದ ಹೋರಾಟಗಾರರೆಂದು ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ಈ ಸಮುದಾಯದ ಬಗ್ಗೆ ಬದ್ಧತೆ ಇದ್ದರೆ ನಾಳಿನ ಸಭೆಯಲ್ಲಿ ಒಳಮೀಸಲಾತಿಗೆ ಅಂಗೀಕಾರ ನೀಡಬೇಕು  ಎಂದು ಆಗ್ರಹಿಸಿದರು.

ಈ ಹಿಂದೆ ವಿರೋಧಿಸುತ್ತಿದ್ದ ಸಮುದಾಯ ಇಂದು ಒಗ್ಗಟ್ಟಾಗಿದೆ. ಸಣ್ಣ ಪ್ರಮಾಣದಲ್ಲಿ ವಿರೋಧ ಇದೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿರುವ ಸಮುದಾಯ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಅವರ ಸಂಖ್ಯೆ ಕೇವಲ ಶೇ. 1ರಷ್ಟಿದೆ. ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಂಡು ಒಳ ಮೀಸಲಾತಿ ಜಾರಿ ಮಾಡಬೇಕು. ಸುಪ್ರೀಂ ಕೋರ್ಟ್ ಮತ್ತು ಸಂವಿಧಾನಕ್ಕೆ ತಲೆಬಾಗಬೇಕು ಎಂದರು.

 

ಚಿಂತಕ ಶಿವಸುಂದರ್ ಮಾತನಾಡಿ, ಸರ್ಕಾರ ಕೈಗೆ ಸಿಕ್ಕಿದ್ದನ್ನು ತಪ್ಪಿಸಿಕೊಳ್ಳುತ್ತಿದೆ. ಇದನ್ನು ನಾವು ದಕ್ಕಿಸಿಕೊಳ್ಳಬೇಕು. ನಾಳಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗದಿದ್ದರೆ ಏನು ಮಾಡಬೇಕು ಎಂದು ಯೋಚಿಸಬೇಕು. ಇದು ಸಾಮಾಜಿಕ ನ್ಯಾಯದ ಪ್ರಶ್ನೆ. ಎಲ್ಲರೂ ಇದಕ್ಕೆ ಬೆಂಬಲ ಸೂಚಿಸಬೇಕು. ನಾವೆಲ್ಲರೂ ಜೊತೆಯಲ್ಲಿರೋಣ ಎಂದರು.

ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ ಎಂಬುವುದು ಮಾತ್ರವಲ್ಲ. ಕೋರ್ಟ್‌ ಇತ್ತೀಚಿನ ದಿನಗಳಲ್ಲಿ ಜನಪರ ತೀರ್ಪು ನೀಡಿಲ್ಲ. ಅದರ, ನಡುವೆ ಈ ತೀರ್ಪು ಬಂದಿರುವುದು ಮುಖ್ಯ. ನಾನು ಕಂಡ ವಿಶಿಷ್ಟ ಆಂದೋಲನ ಇದಾಗಿದೆ. ಸತತ ಮೂರು ದಶಕಗಳ ಹೋರಾಟದಲ್ಲಿ ಇತರೆ ಸಮುದಾಯವನ್ನು ಒಪ್ಪಿಕೊಂಡು ಹೋರಾಟ ಮಾಡುತ್ತಾ ಬಂದಿರುವುದು ದೊಡ್ಡ ವಿಷಯ. ದಲಿತ ಚಳವಳ ನಿರಂತರವಾಗಿ ನಡೆದು ಬರುತ್ತಿರುವಾಗ ದುಷ್ಟ ಶಕ್ತಿಗಳ ನಡುವೆ ಹೋರಾಟ ಮಾಡಿದೆ. ಯಾವ ಸಂಚಿಗೂ ಬಲಿಯಾಗದೆ ಸಮುದಾಯವನ್ನು ಉಳಿಸಿಕೊಳ್ಳುವ ಕೆಲಸದ ಜೊತೆಗೆ, ವಿಚಾರ ಒಪ್ಪದ ಎಲ್ಲರನ್ನೂ ಮನವೊಲಿಸಿದೆ. ಈ ಹೋರಾಟಕ್ಕೆ ಬಹಳಷ್ಟು ಮಹತ್ವ ಇದೆ. ಇಡೀ ಸಮುದಾಯವನ್ನು ಒಪ್ಪಿಸಿದ್ದು ಬಹಳ ದೊಡ್ಡ ಜಯ ಎಂದು ಹೇಳಿದರು.

ಎರಡನಡೇ ಸಾಧನೆ ಕರ್ನಾಟಕದ ಎಲ್ಲಾ ಜನಪರ ಚಿಂತಕರು ಮತ್ತು ಸಂಘಟನೆಗಳನ್ನು ಈ ಹೋರಾಟಕ್ಕೆ ಒಪ್ಪಿಸಿದ್ದು. ಮೂರನೇ ಜಯ ಎಲ್ಲಾ ವಿರೋಧ ಪಕ್ಷಗಳು ಇದನ್ನು ಒಪ್ಪಿಕೊಳ್ಳಬೇಕಾಯಿತು. ನಾಲ್ಕನೆಯದ್ದಾಗಿ ನ್ಯಾಯಾಲಯವೂ ಕೂಡ ತೀರ್ಪು ನೀಡಿ ಬೆಂಬಲ ನೀಡಿದೆ. ಕಾಂಗ್ರೆಸ್ ಪಕ್ಷ ಎಂದರೆ ದ್ವಂದ್ವಗಳ ಪಕ್ಷ. ಅಲ್ಲಿ ಎಲ್ಲರೂ ಒಪ್ಪುತ್ತಾರೆ ಎಂಬುವುದು ಅನುಮಾನ. ಇದು ಜಾರಿಯಾಗಬಾರದು ಎಂಬ ಗುಂಪು ಕೆಲಸ ಮಾಡುತ್ತಿರುತ್ತದೆ. ಭಿನ್ನಾಪ್ರಾಯ ಬಂದಾಗ ಅವರು ಏನು ಮಾಡುತ್ತಾರೆ ಎನ್ನುವುದು ಮುಖ್ಯ ಎಂದರು.

 

ಅಡ್ಡಗೋಡೆ ಮೇಲೆ ದೀಪು ಇಡುವ ತೀರ್ಮಾಣ ನಾಳೆ ಬಂದರೂ ಬರಬಹುದು. ನಾಳೆ ಎಂದು ಕಾಯಿಸುವ ಆಪಾಯವೂ ಇದೆ. ಒಂದು ವೇಳೆ ಹಾಗಾದರೆ ನಾಡಿದ್ದು ಏನು ಎಂಬುವುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ. ದಯವಿಟ್ಟೂ ಯಾವುದೇ ಗ್ಯಾಪ್ ಕೊಡಬಾರದು ಎಂಬುವುದು ಸಮಿತಿಗೆ ನನ್ನ ಸಲಹೆ. ಸರ್ಕಾರ ತೀರ್ಮಾಣ ಬರದಿದ್ದರೆ ನಾಡಿದ್ದರಿಂದ ಹೋರಾಟ ಮಾಡಬೇಕು. ಇಲ್ಲಿಯವರೆಗೆ ಮಾಡಿರುವ ಜನ ಹೋರಾಟದಿಂದಲೇ ತೀರ್ಪು ಕೂಡ ಬಂದಿರುವುದು. ಇದರ ಅಂತಿಮ ಫಲಿತಾಂಶ ಕೂಡ ಹೋರಾಟದಿಂದಲೇ ಆಗಬೇಕು ಎಂದು ಹೇಳಿದರು.

 

ಮುಂದಿನ ಹೋರಾಟ ಸಮುದಾಯದ ಮೇಲೆ ಮಾತ್ರ ಬೀಳದೆ ಎಲ್ಲಾ ಜನಪರ ಸಂಘಟನೆಗಳ ಜವಾಬ್ದಾರಿ ಆಗಬೇಕು. ಗೆಲುವು ಸಿಗುವವರೆಗೂ ಜೊತೆಯಲ್ಲಿದ್ದು ಹೋರಾಟ ಮಾಡೋಣ. ಮೂರು ದಶಕಗಳ ಹೋರಾಟಕ್ಕೆ ಗೆಲುವು ಸಿಗಬೇಕು. ಆದರೆ, ಗೆಲುವು ತಡವಾಗಬಾರದು. ಗೆಲುವು ಸಿಗದಿದ್ದರೆ ನಾಡಿದ್ದರಿಂದ ಮತ್ತೆ ಹೋರಾಟ ಮಾಡೋಣ.

ಮಾರಸಂದ್ರ ಮುನಿಯಪ್ಪ ಮಾತನಾಡಿ, ಮೊದಲ ಸಚಿವ ಸಂಪುಟ ಸಭೆಯಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಚಿತ್ರದುರ್ಗದ ಸಮಾವೇಶದಲ್ಲಿ ಸಿದ್ದರಾಮಯ್ಯ ಚುನಾವಣೆಗೂ ಮುಂಚೆ ಹೇಳಿದ್ದರು. ಬಿಜೆಪಿ ಕೂಡ ಕೇಂದ್ರಕ್ಕೆ ಪತ್ರ ಬರೆದು ನಮ್ಮನ್ನು ಯಾಮಾರಿಸಿತ್ತು. ರಾಜ್ಯದ ಮೂರು ಪಕ್ಷಗಳು ಏನೂ ಮಾಡಿಲ್ಲ. ಸುಪ್ರೀಂ ಕೋರ್ಟ್‌ ಮಾತ್ರ ತೀರ್ಪು ನೀಡಿದೆ. ತೀರ್ಪು ನೀಡಿ ಇಷ್ಟು ದಿನವಾದರೂ ಜಾರಿಗೆ ಮೀನಾಮೇಶ ಎಣಿಸುತ್ತಿರುವುದು ಏಕೆ? ಹೊಲೆಯರು, ಲಂಬಾಣಿ, ಭೋವಿಗಳು ವಿರೊಧ ಮಾಡುತ್ತಿಲ್ಲ. ಇಷ್ಟಿದ್ದರೂ ವಿಳಂಬ ಏಕೆ? ಸಾಯೋವರೆಗೂ ನಾವು ಹೋರಾಟ ಮಾಡಬೇಕು. ಸಾಯೋವರೆಗೂ ಕುಸ್ತಿ ಅಭ್ಯಾಸ ಮಾಡಿದರೆ ಕುಸ್ತಿ ಮಾಡುವುದು ಯಾವಾಗ? ಆಂದ್ರ, ಕರ್ನಾಟಕದಲ್ಲಿ ಈ ಹೋರಾಟದಲ್ಲಿ ಹಲವರು ಸತ್ತಿದ್ದಾರೆ. ನಾವು ಶತಾಯಗತಾಯ ಪ್ರಯತ್ನ ಮಾಡಿದರೂ ಬಿಎಸ್‌ಪಿಯಿಂದ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಸುಪ್ರೀಂ ರ್ಕೋರ್ಟ್‌ ತೀರ್ಪನ್ನು ಮಾಯಾವತಿ ವಿರೋಧಿಸಿದ್ದಾರೆ. ನಾವು ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲು ಲಕ್ನೋಗೆ ತೆರಳಿದರೂ ಅವರ ಭೇಟಿಗೆ ಸಾಧ್ಯವಾಗಲಿಲ್ಲ. ನಮಗೆ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರಿಂದ ವಿರೋಧ ಬಂದಿತ್ತು. ಉತ್ತರ ಭಾರತದ ಚಮ್ಮಾರರು ಮೀಸಲಾತಿ ಪಡೆದುಕೊಂಡಿದ್ದಾರೆ. ಸಣ್ಣಪುಟ್ಟ ಜಾತಿಗಳಿಗೆ ಮೀಸಲಾತಿ ಸಿಗುವುದು ಅವರಿಗೆ ಇಷ್ಟವಿಲ್ಲ. ಉತ್ತರ ಮತ್ತು ದಕ್ಷಿಣ ಭಾರತದ ವಿವಾದಗಳೇ ಬೇರೆ ಬೇರೆ. ಇದನ್ನು ಅವರಿಗೆ ನಾವು ಮನವರಿಗೆ ಮಾಡಿದರೂ ಅವರಿಗೆ ಅರ್ಥವಾಗಿಲ್ಲ. ಮಾಯಾವತಿ ನಿಲುವು ವಿರೋಧಿಸಿ ನಾವು ರಾಜೀನಾಮೆ ನೀಡಿದ್ದೇವೆ. 25 ಜಿಲ್ಲೆಗಳ ಜಿಲ್ಲಾಧ್ಯಕ್ಷರೂ ರಾಜೀನಾಮೆ ನೀಡಿದ್ದಾರೆ ಎಂದು ವಿವರಿಸಿದರು.

ನಾವು ಹೀಗೆ ಹೋರಾಟ ಮಾಡಿದರೆ ಸಾಕಾಗುವುದಿಲ್ಲ. ಎಲ್ಲಾ ಮಂತ್ರಿಗಳು ಮತ್ತು ಶಾಸಕರ ಮನೆ ಮುಂದೆ, ಅವರ ಕ್ಷೇತ್ರಗಳಲ್ಲೇ ಕುತ್ತಿಗೆ ಹಿಡಿದು ಕೇಳಬೇಕು. ಅವರು ಈ ಸಮಸ್ಯೆ ನಮ್ಮದಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೆಂಬಲ ನೀಡದಿದ್ದರೆ ನಾವು ಸುಮ್ಮನಿರಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಕೇಳಬೇಕು. ಮಾತಿಗೆ ತಪ್ಪಲ್ಲ ಎನ್ನುವ ಸಿದ್ದರಾಮಯ್ಯ ಈಗ ಮಾತು ತಪ್ಪುತ್ತಿದ್ದಾರೆ. ಶಾಸಕರು, ಸಚಿವರು ಮನೆ ಮುಂದೆ ಹೋರಾಟಹಮ್ಮಿಕೊಳ್ಳಬೇಕು. ಇದಕ್ಕೆ ಬಿಎಸ್‌ಪಿಯಿಂದ ಹೊರ ಬಂದಿರುವ ನಮ್ಮೆಲ್ಲ ಬೆಂಬಲವೂ ಇದೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಗೆ ಅಂಗೀಕಾರ ನೀಡಬಹುದು ಎಂಬ ವಿಶ್ವಾಸ ಇಲ್ಲ. ಇದಕ್ಕೆ ಸಮಿತಿ ರಚಿಸುವ ಸಾಧ್ಯತೆ ಇದೆ ಎಂದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version