ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಚನ್ನಪಟ್ಟಣ ಉಪಚುನಾವಣೆ | ಮುನಿರತ್ನ ಕುಕೃತ್ಯ ಎನ್‌ಡಿಎ ಮೈತ್ರಿಗೆ ಹೊಡೆತ ಬೀಳಲಿದೆಯೇ?

Published

on

ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರು ಒಕ್ಕಲಿಗರು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ವಿಷಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿಗಳು ಉಲ್ಲೇಖಿಸಿದ್ದು, ಚುನಾವಣೆ ಪ್ರಚಾರದ ವೇಳೆ ಈ ವಿಚಾರಗಳು ಸದ್ದು ಮಾಡಲಿವೆ. ಆದರೆ ಬಿಜೆಪಿ ಈ ಚುನಾವಣೆಯಲ್ಲಿ ಮಂಡ್ಯದ ನಾಗಮಂಗಲ ಹಿಂಸಾಚಾರ ವಿಚಾರವನ್ನು ಬಳಸಿಕೊಳ್ಳಲಿದೆ.

ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ತಿರುಗೇಟು ನೀಡಲು ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿಯೆ ರಾಜ್ಯ ಜೆಡಿಎಸ್‌ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಮುನಿರತ್ನ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರು ಆರೋಪಿಸಿದ್ದಾರೆ.

 

ಮುನಿರತ್ನ ವಿರುದ್ಧ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರು ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ದಲಿತ ಧಾರ್ಮಿಕ ಮುಖಂಡರು ಪ್ರತಿಭಟನೆಗೆ ಮನವಿ ಮಾಡಿದ್ದಾರೆ.

 

 

ಅಲ್ಲದೆ, ಒಕ್ಕಲಿಗರು ಮತ್ತು ದಲಿತರ ಒಂದು ವಿಭಾಗವು ಮುನಿರತ್ನ ಅವರನ್ನು ಖಂಡಿಸಿ ಕರ್ನಾಟಕದಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದೇ ವೇಳೆ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುನಿರತ್ನ ಹೇಳಿಕೆಯನ್ನು ಕ್ಷಮಿಸಲಾಗದು ಎಂದು ಹೇಳಿದ್ದಾರೆ.

 

ಚನ್ನಪಟ್ಟಣ ಉಪಚುನಾವಣೆಯವರೆಗೂ ಕಾಂಗ್ರೆಸ್ ಈ ಬಿಸಿಯನ್ನು ಹಾಗೆ ಉಳಿಸಿಕೊಳ್ಳಲು ಬಯಸಿದ್ದು, ಈ ವಿಚಾರವು ಒಕ್ಕಲಿಗರು ಮತ್ತು ದಲಿತರ ಪರ ಧ್ರುವೀಕರಣಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾಗಿ TNIE ವರದಿ ಹೇಳಿದೆ. “ಮುನಿರತ್ನ ವಿಚಾರವು ದೊಡ್ಡ ಪರಿಣಾಮ ಬೀರಲಿದೆ” ಎಂದು ಅವರು ಹೇಳಿದ್ದಾರೆ.

 

ಅದಾಗ್ಯೂ, ಬೆಂಗಳೂರು ನಗರದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಮುನಿರತ್ನ ಪ್ರಭಾವ ಸೀಮಿತವಾಗಿರುವುದರಿಂದ ಮುನಿರತ್ನ ಅವರು ಪಕ್ಷದ ಮುಖವಲ್ಲದ ಕಾರಣ ಈ ಚುನವಣೆಯಲ್ಲಿ ಅವರ ಕೃತ್ಯಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಪರ ವ್ಯಕ್ತಿಗಳು ಪ್ರತಿಪಾದಿಸುತ್ತಿದ್ದಾರೆ. ನಾಗಮಂಗಲದ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಈ ವಿಷಯವನ್ನು ಗಾಳಿಗೆ ತೂರುತ್ತಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

 

ಉಪ ಚುನಾವಣೆಗೆ ಯಾರು ಸ್ಪರ್ಧಿಸಬಹುದು ಎಂದು ಕಾಂಗ್ರೆಸ್ ಒಳಗೆ ಹೆಸರುಗಳು ಮುನ್ನಲೆಗೆ ಬರುತ್ತಿವೆಯಾದರೂ ಇನ್ನೂ ಅಂತಿಮವಾಗಿಲ್ಲ. ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ಬಿಜೆಪಿಯಲ್ಲಿ ಹಲವಾರು ಹೆಸರುಗಳು ಮುನ್ನಲೆಯಲ್ಲಿದೆ. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಸೀಟು ತಮ್ಮ ಪಕ್ಷಕ್ಕೆ ಬರುವಂತೆ ಎನ್‌ಡಿಎ ಮೈತ್ರಿಯಲ್ಲಿ ಲಾಭಿ ಮಾಡಿಕೊಳ್ಳುತ್ತಿದ್ದಾರೆ. ಭಾಗಶಃ ಈ ಕ್ಷೇತ್ರ ಜೆಡಿಎಸ್ ಕೈಗೆ ಹೋಗುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಒಂದು ವೇಳೆ ಬಿಜೆಪಿ ತನ್ನ ಪಕ್ಷ ಮೈತ್ರಿ ಜೆಡಿಎಸ್‌ಗೆ ಟಿಕೆಟ್ ಬಿಟ್ಟುಕೊಟ್ಟರೆ ಸಿಪಿ ಯೋಗೇಶ್ವರ್ ಅವರ ಬಂಡಾಯವನ್ನು ಪಕ್ಷವು ಎದುರಿಸಬೇಕಾಗುತ್ತದೆ. ಜೊತೆಗೆ ಸಿಪಿ ಯೋಗೇಶ್ವರ್ ಅವರ ಬಂಡಾಯ ಜೆಡಿಎಸ್‌ಗೂ ದುಬಾರಿಯಾಗಿ ಪರಿಣಮಿಸಲಿದ್ದು, ಕಾಂಗ್ರೆಸ್ ಇಲ್ಲಿ ಅನಾಯಸವಾಗಿ ಗೆಲ್ಲುತ್ತದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ಬಿಜೆಪಿಯಿಂದ ಟಿಕೆಟ್ ತಪ್ಪಿದರೆ ಸಿಪಿ ಯೋಗೇಶ್ವರ್ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ನಡುವೆ ಅವರು ಬಿಎಸ್‌ಪಿಯಿಂದ ಸ್ಪರ್ಧಿಸುತ್ತಾರೆ ಎಂದು ಕೂಡಾ ಊಹಾಪೋಹ ಹರಿದಾಡಿತ್ತು. ಅಲ್ಲದೆ ಕಾಂಗ್ರೆಸ್ ಕೂಡಾ ಅವರನ್ನು ಸೆಳೆಯುವ ಸಾಧ್ಯತೆ ಇದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version