Published
2 months agoon
By
Akkare Newsಜಾರ್ಖಂಡ್‌ನಲ್ಲಿ ಪಕ್ಷದ ನಾಯಕರ ವಲಸೆಯನ್ನು ತಡೆಯಲು ಬಿಜೆಪಿ ಕೈಗೊಂಡ ಡ್ಯಾಮೇಜ್ ಕಂಟ್ರೋಲ್ ಕ್ರಮಗಳ ನಡುವೆಯು, ಪಕ್ಷದ ವಿರುದ್ಧವಾಗಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ 30 ಬಂಡಾಯ ನಾಯಕರನ್ನು ಬಿಜೆಪಿ ಮಂಗಳವಾರ ಉಚ್ಚಾಟಿಸಿದೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರ ನಿರ್ದೇಶನದ ಮೇರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಪ್ರದೀಪ್ ವರ್ಮಾ ಅವರು ಬಂಡಾಯ ನಾಯಕರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಬಿಜೆಪಿ ಘೋಷಿಸಿದ 35 ಕ್ಕೂ ಹೆಚ್ಚು ಅಭ್ಯರ್ಥಿಗಳು ಬೇರೆ ಪಕ್ಷದಿಂದ ಬಂದ ನಾಯಕರಾಗಿದ್ದು, ಇದು ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿತ್ತು. “ಅವರ ವಿಶ್ವಾಸಾರ್ಹತೆಯ ಬಗ್ಗೆ ಪಕ್ಷದೊಳಗೆ ಅನುಮಾನವುದೆ. ಅವರಲ್ಲಿ ಹಲವರು ಪಕ್ಷವನ್ನು ತೊರೆದು ಜೆಎಂಎಂ ಅಥವಾ ಕಾಂಗ್ರೆಸ್‌ಗೆ ಸೇರಲು ಬಯಸುತ್ತಿದ್ದಾರೆ” ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಈ ಬಿಕ್ಕಟ್ಟನ್ನು ನಿರ್ವಹಿಸಲು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ರಾಂಚಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಅತೃಪ್ತ ನಾಯಕರೊಂದಿಗೆ ಸಾಧ್ಯವಾದಷ್ಟು ಮತ್ತೆ ಸಂಪರ್ಕ ಸಾಧಿಸಲು ಮತ್ತು ಸಕಾರಾತ್ಮಕ ವಾತಾವರಣವನ್ನು ಬೆಳೆಸಲು ಅವರು ಪಕ್ಷದ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ. ಅಭ್ಯರ್ಥಿಗಳ ಘೋಷಣೆಯ ನಂತರ ಮತ್ತಷ್ಟು ರಾಜೀನಾಮೆಗಳನ್ನು ತಡೆಯಲು ಸಂತೋಷ್ ಒತ್ತು ನೀಡಿದ್ದಾರೆ ಎಂದು ವರದಿಯಾಗಿದೆ. ಇಷ್ಟೆ ಅಲ್ಲದೆ, ಶಿವರಾಜ್ ಸಿಂಗ್ ಚೌಹಾಣ್ ಅವರಂತಹ ಹಿರಿಯ ನಾಯಕರು ಅತೃಪ್ತ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತಾರೂಢ ಇಂಡಿಯಾ ಮೈತ್ರಿಕೂಟವು ‘ಒಂದು ಮತ, ಏಳು ಗ್ಯಾರಂಟಿ’ ಎಂಬ 7 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದೆ. ಈ ಗ್ಯಾರೆಂಟಿಗಳಲ್ಲಿ ಪ್ರತ್ಯೇಕ ಹಿಂದುಳಿದ ವರ್ಗ ಕಲ್ಯಾಣ ಸಚಿವಾಲಯದ ಭರವಸೆ ನೀಡಿದೆ. ಬುಡಕಟ್ಟು ಜನಾಂಗದವರನ್ನು ಓಲೈಸಲು ಖತಿಯಾನ್ ಆಧಾರಿತ ನಿವಾಸ ನೀತಿಯನ್ನು ಪರಿಚಯಿಸಲಾಗಿದೆ.