ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಅದಾನಿ ಎನರ್ಜಿ ವಂಚನೆ : 20%ಶೇರ್ ಕುಸಿತ :$600ಮಿಲಿಯನ್ ಬಾಂಡ್ ನೀಡುವುದನ್ನು ರದ್ದು ಮಾಡಿದ ಕಂಪೆನಿ

Published

on

ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ದ ಅಮೆರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ ವರದಿಯ ನಂತರ ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳು 20% ಕುಸಿತ ಕಂಡಿದ್ದು, ಜೊತೆಗೆ ಕಂಪೆನಿಯು ತನ್ನ $600 ಮಿಲಿಯನ್ ಬಾಂಡ್ ನೀಡುವುದನ್ನು ರದ್ದುಗೊಳಿಸಿದೆ.

 

 

ಅದಾನಿ ಗ್ರೀನ್ ಎನರ್ಜಿ 18.76% ಕುಸಿದರೆ, ಅದಾನಿ ಎನರ್ಜಿ ಸಲ್ಯೂಷನ್ಸ್ 20%, ಅದಾನಿ ಎಂಟರ್‌ಪ್ರೈಸಸ್ 10%, ಅದಾನಿ ಪವರ್ 13.98% ಮತ್ತು ಅದಾನಿ ಪೋರ್ಟ್ಸ್ 13.98% ದಷ್ಟು ಬೆಳಗಿನ ಅವಧಿಯಲ್ಲಿ ಕುಸಿದವು ಎಂದು ವರದಿಯಗಳು ಉಲ್ಲೇಖಿಸಿವೆ.

 

 

ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಆರೋಪಿಗಳು 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭ ತರಲಿದ್ದ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿದ್ದರು ಎನ್ನಲಾಗಿದೆ.

 

 

 

ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿರುವ ಅಮೆರಿಕದ ಅಟಾರ್ನಿ ಕಚೇರಿಯ ಮಾಹಿತಿ ಪ್ರಕಾರ, ಗೌತಮ್ ಅದಾನಿ, ಸಾಗರ್‌ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್‌ ವಿರುದ್ಧ ಐದು ಅಂಶಗಳ ಕ್ರಿಮಿನಲ್‌ ಆರೋಪಪಟ್ಟಿ ಸಲ್ಲಿಸಲಾಗಿದೆ. ಬಂಡವಾಳ ಆಕರ್ಷಿಸಲು ಅಮೆರಿಕದ ಹೂಡಿಕೆದಾರರು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಿಗೆ ಸುಳ್ಳು ಮತ್ತು ತಪ್ಪು ಹೇಳಿಕೆ ನೀಡಿರುವ ಆರೋಪ ಇವರ ಮೇಲಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ.

ನ್ಯಾಯಾಧೀಶರು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ದ ಬಂಧನ ವಾರೆಂಟ್‌ಗಳನ್ನು ಹೊರಡಿಸಿದ್ದಾರೆ. ಆ ವಾರೆಂಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ತಿಳಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರವಾಲ್‌ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಹೋತ್ರಾ ಮತ್ತು ಸೌರಬ್‌ ಅಗರವಾಲ್‌ ಅವರು ಲಂಚ ನೀಡಿರುವುದು ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

 

“ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತೆ ಭಾರತ ಸರ್ಕಾರದ ಅಧಿಕಾರಿಗಳಿಗೆ ಆರೋಪಿಗಳು ಲಂಚ ನೀಡಿದ್ದಾರೆ. ಲಂಚ ಹಾಗೂ ಭ್ರಷ್ಟಾಚಾರದ ಕುರಿತು ಸುಳ್ಳು ಹೇಳಿಕೆಗಳ ಮೂಲಕ ಅದಾನಿ ಹಾಗೂ ಇತರ ಆರೋಪಿಗಳು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ” ಎಂದು ಆರೋಪಿಸಲಾಗಿದೆ.

 

ದೋಷಾರೋಪಣೆಯ ಪ್ರಕಾರ, ಆರೋಪಿಗಳು ವಂಚನೆಗೆ ಗೌತಮ್ ಅದಾಮಿ ಅವರನ್ನು “ನ್ಯೂಮೆರೊ ಯುನೊ” ಮತ್ತು “ಬಿಗ್ ಮ್ಯಾನ್‌” ಎಂಬ ಕೋಡ್ ಹೆಸರುಗಳೊಂದಿಗೆ ಖಾಸಗಿಯಾಗಿ ಕರೆಯತ್ತಿದ್ದರು. ಸಾಗರ್ ಅದಾನಿ ಲಂಚದ ವ್ಯವಹಾರದ ಬಗ್ಗೆ ನಿಗಾ ಇಡಲು ತಮ್ಮ ಸೆಲ್ ಫೋನ್ ಬಳಸಿದ್ದಾರೆ ಎಂದು ಹೇಳಲಾಗಿದೆ.

ಅದಾನಿ ಮತ್ತು ಆತನ ಸಂಬಂಧಿಗಳು, ವಿನೀತ್ ಜೈನ್ ಸೇರಿದಂತೆ ಅದಾನಿ ಗ್ರೀನ್ ಎನರ್ಜಿಯ ಕಾರ್ಯನಿರ್ವಾಹಕರು ಸಾಲದಾತರು ಮತ್ತು ಹೂಡಿಕೆದಾರರಿಂದ ಭ್ರಷ್ಟಾಚಾರವನ್ನು ಮರೆಮಾಚುವ ಮೂಲಕ ತಮ್ಮ ಕಂಪನಿಗೆ 3 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಸಾಲ ಮತ್ತು ಬಾಂಡ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

 

“ಈ ಪ್ರಕರಣ ಕುರಿತ ತನಿಖೆಯನ್ನು ತಡೆಯಲು ಎಫ್‌ಬಿಐ, ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟಿ ಅಂಡ್ ಎಕ್ಸ್‌ಚೇಂಜ್ ಕಮಿಷನ್‌ ಕೂಡಾ ಪ್ರಯತ್ನಿಸುತ್ತಿದೆ” ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾಗಿ ವರದಿಯಾಗಿದೆ.
ಪ್ರಕರಣದ ತನಿಖೆಯನ್ನು ನ್ಯೂಯಾರ್ಕ್‌ನ ಎಫ್‌ಬಿಐ ಕಚೇರಿ ನಡೆಸುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version