ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಮೋದಿಯನ್ನು ಹೊಗಳಿದ ಜಮ್ಮು ಕಾಶ್ಮೀರ ಸಿಎಂ; ವಿಪಕ್ಷಗಳಿಂದ ಭಾರಿ ಟೀಕೆ

Published

on

ಸೋಮವಾರ ಮಧ್ಯ ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಝಡ್-ಮೋರ್ ಸುರಂಗದ ಉದ್ಘಾಟನೆಯ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಕ್ಕಾಗಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಮಾಜಿ ಸಚಿವ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಗನಿ ಲೋನ್ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಮಟ್ಟು ಅವರು ಟೀಕಿಸಿದ್ದಾರೆ.

“ಅಲ್ಪ ದೂರದೃಷ್ಟಿಯ ರಾಜಕಾರಣಿ ಮತ್ತು ನಿಜವಾದ ರಾಜಕಾರಣಿಯ ನಡುವಿನ ವ್ಯತ್ಯಾಸ. 2003 ರಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಿನ ಬಿಜೆಪಿ ಪ್ರಧಾನಿ ವಾಜಪೇಯಿ ಅವರು ಪಿಡಿಪಿಗೆ ಕೇವಲ 16 ಶಾಸಕರಿದ್ದರೂ ಸಹ, ಮುಫ್ತಿ ಸಾಹಬ್ ಅವರ ಘನತೆಯೊಂದಿಗೆ ಶಾಂತಿ ಎಂಬ ದೃಷ್ಟಿಕೋನದ ಬಗ್ಗೆ ಹೆಚ್ಚು ನಂಬಿಕೆ ವ್ಯಕ್ತಪಡಿಸಿದ್ದರು. ಇಂದು ನಮ್ಮ ಮುಖ್ಯಮಂತ್ರಿ 50 ಶಾಸಕರ ಹೊರತಾಗಿಯೂ, ಆಗಸ್ಟ್ 2019 ರಲ್ಲಿ ಜಮ್ಮು ಕಾಶ್ಮೀರವನ್ನು ವಿಭಜಿಸಿ, ರಾಜ್ಯದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ದೆಹಲಿ ಸರ್ಕಾರದ ಏಕಪಕ್ಷೀಯ ಕ್ರಮಗಳನ್ನು ಸಮಾಧಾನಪಡಿಸಲು ಮತ್ತು ಸಾಮಾನ್ಯಗೊಳಿಸಲು ಎಲ್ಲವನ್ನೂ ಮಾಡಿದ್ದಾರೆ.” ಎಂದು ಮೆಹಬೂಬಾ ಮುಫ್ತಿ ಎಕ್ಸ್‌ನಲ್ಲಿ ಹೇಳಿದ್ದಾರೆ.

ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು 6.4 ಕಿ.ಮೀ ಉದ್ದದ ಝಡ್-ಮೋರ್ ಸುರಂಗ ಮಾರ್ಗವನ್ನು ಉದ್ಘಾಟಿಸಿದ ನಂತರ ಸೋನಾಮಾರ್ಗ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ರಾಜ್ಯದಲ್ಲಿನ ಅಂತರವನ್ನು ಕಡಿಮೆ ಮಾಡಲು ಪ್ರಧಾನಿಯವರು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದರು.

“ಪ್ರದೇಶದಲ್ಲಿ ‘ದಿಲ್ ಕಿ ದೂರಿ’ ಮತ್ತು ‘ದೆಹಲಿ ಕಿ ದೂರಿ’ ಎರಡನ್ನೂ ಕಡಿಮೆ ಮಾಡಲು ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಒಮರ್ ಒತ್ತಿ ಹೇಳಿದ್ದಾರೆ. ಜೊತೆಗೆ, ಜಮ್ಮು ಕಾಶ್ಮೀರದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿದ್ದಕ್ಕಾಗಿ ಪ್ರಧಾನಿಯವರನ್ನು ಶ್ಲಾಘಿಸಿದ್ದಾರೆ.

“ಜನರು ಮತದಾನದಲ್ಲಿ ತೀವ್ರವಾಗಿ ಭಾಗವಹಿಸಿದರು, ಮತ್ತು ಯಾವುದೇ ರಿಗ್ಗಿಂಗ್ ಅಥವಾ ಚುನಾವಣಾ ಅಕ್ರಮಗಳ ದೂರುಗಳು ಕೇಳಿ ಬಂದಿಲ್ಲ. ಒಂದೇ ಒಂದು ಮತಗಟ್ಟೆಗೂ ಮರು ಮತದಾನದ ಅಗತ್ಯವಿರಲಿಲ್ಲ. ಇದರ ಕೀರ್ತಿ ನಿಮಗೆ, ನಿಮ್ಮ ಸಹಚರರಿಗೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಇದೇ ವೇಳೆ ಅವರು ಕಠಿಣ ಹವಾಮಾನದ ನಡುವೆಯೂ ಝಡ್-ಮೋರ್ ಸುರಂಗವನ್ನು ಉದ್ಘಾಟಿಸಲು ಬಂದಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಆದಾಗ್ಯೂ, ಮುಖ್ಯಮಂತ್ರಿಯ ಹೇಳಿಕೆ ವಿವಿಧ ರಾಜಕೀಯ ವ್ಯಕ್ತಿಗಳಿಂದ ತೀವ್ರ ಟೀಕೆಗೆ ಗುರಿಯಾದವು. ಮಾಜಿ ಸಚಿವ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೋನ್, “ಇಗೋ ನಮ್ಮ ಸಿಎಂ ಸಾಹಿಬ್, ಪ್ರಧಾನಿ ಸಾಹಿಬ್‌ಗೆ ದಾರಿ ಮಾಡಿಕೊಟ್ಟಿದ್ದಕ್ಕಾಗಿ ಸಂತೋಷದಿಂದ ಕಿವಿಯಿಂದ ಕಿವಿಗೆ ನಗುತ್ತಿದ್ದಾರೆ” ಎಂದು ಎಕ್ಸ್‌ನಲ್ಲಿ ಓಮರ್ ಅಬ್ದುಲ್ಲಾ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಅವರು ಪ್ರಧಾನಿಯನ್ನು ಹೊಗಳುತ್ತಿರುವ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

 

 

ಶ್ರೀನಗರದ ಮಾಜಿ ಮೇಯರ್ ಜುನೈದ್ ಮಟ್ಟು ಕೂಡ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇಂದು, ಅದೇ ಮೋದಿ ಅವರನ್ನು ಸ್ವಾಗತಿಸುವುದು ಒಮರ್ ಅಬ್ದುಲ್ಲಾಗೆ ಹಲಾಲ್ ಆಗಿ ಮಾರ್ಪಟ್ಟಿದೆ” ಎಂದು ಹೇಳಿದ್ದಾರೆ. ತಾನು ಮೇಯರ್ ಆಗಿದ್ದಾಗ, ಶ್ರೀನಗರದಲ್ಲಿ ಪ್ರಧಾನಿ ಮೋದಿಯನ್ನು ಬರಮಾಡಿಕೊಂಡಾಗ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಅದರ ಬೆಂಬಲಿಗರು ಅವರನ್ನು ಟೀಕಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಇಮ್ರಾನ್ ನಬಿ ದಾರ್ ಅವರು ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡಿದ್ದು, ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಜಮ್ಮು ಕಾಶ್ಮೀರದ ರಾಜ್ಯತ್ವವನ್ನು ಪುನಃಸ್ಥಾಪಿಸಲು ಪ್ರಧಾನಿಯನ್ನು ಒತ್ತಾಯಿಸುವುದು ಒಮರ್ ಅವರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version