Published
3 months agoon
By
Akkare Newsಹೈಕಮಾಂಡ್ ಸೂಚನೆಯ ಬಳಿಕವೂ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರು ಮತ್ತು ಕಾಂಗ್ರೆಸ್ ಶಾಸಕರಿಗೆ ‘ಬಾಯಿ ಮುಚ್ಚಿಕೊಂಡು’ ಕೆಲಸ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾಕೀತು ಮಾಡಿದ್ದಾರೆ.
ಶುಕ್ರವಾರ (ಜ.17) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು”ಹೈಕಮಾಂಡ್ ತೀರ್ಮಾನ ಏನಿದೇ ಅದೇ ಫೈನಲ್. ಹಾಗಾಗಿ, ನನ್ನ ಒಂದು ಸೂಚನೆ ಏನಂದ್ರೆ ‘ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ನೆ ಕೆಲಸ ಮಾಡ್ಬೇಕು’. ಯಾವಾಗ ಏನು ತೀರ್ಮಾನ ತೆಗೆದುಕೊಳ್ಳಬೇಕು, ಅದು ನಮಗೆ ಬಿಟ್ಟಿದ್ದು. ಮೊದಲು ಕೊಟ್ಟ ಕೆಲಸಗಳನ್ನು ಮಾಡಿ. ಜನರನ್ನು ಅಭಿವೃದ್ದಿಗೆ ಕಡೆಗೆ ಒಯ್ಯಿರಿ, ಪಕ್ಷಕ್ಕೆ ಬಲ ತನ್ನಿ. ಆ ಕೆಲಸ ಮೊದಲು ಮಾಡಿ. ಹೇಳಿಕೆ ಕೊಡುವುದರಂದ ಏನೂ ಪ್ರಯೋಜನ ಆಗುವುದಿಲ್ಲ” ಎಂದು ಸಚಿವರು, ಶಾಸಕರಿಗೆ ತಾಕೀತು ಮಾಡಿದ್ದಾರೆ.
“ಈಗ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾಳೆ, ನಾಡಿದ್ದು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಊಹಾಪೋಹಾ ಯಾರೂ ಮಾತನಾಡಬಾರದು” ಎಂದು ಖಡಕ್ ಸೂಚನೆ ನೀಡಿದ್ದಾರೆ.
ಪರಿಶಿಷ್ಟ ಸಚಿವರು ಮತ್ತು ಶಾಸಕರ ಪ್ರತ್ಯೇಕ ಔತಣಕೂಟ, ಮುಖ್ಯಮಂತ್ರಿ , ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಬಹಿರಂಗ ಹೇಳಿಕೆಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಉಂಟಾಗಿತ್ತು. ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದರೂ, ಅದು ಮುಂದವರೆದಿತ್ತು. ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷರು ನೇರ ಎಚ್ಚರಿಕೆ ಕೊಟ್ಟಿದ್ದಾರೆ.