Published
8 months agoon
By
Akkare News
ಮಂಗಳೂರು: ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಕೋರಿ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ. ಪ್ರಸ್ತಾವನೆ ಪರಿಶೀಲಿಸುವ ಭರವಸೆ ಸಚಿವರಿಂದ ದೊರೆತಿದೆ.



ರಾಜ್ಯದ 2ನೇ ಪ್ರಮುಖ ನಗರವಾದ ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿದ್ದು, ಇಲ್ಲಿ ಮೆರಿಟೈಮ್ ವಿಶ್ವ ವಿದ್ಯಾಲಯ ಸ್ಥಾಪನೆಯಿಂದ ಕಡಲ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಉತ್ತೇಜನ ದೊರಕಲಿದೆ. ಇಲ್ಲಿಯ ಭೌಗೋಳಿಕ ಅನುಕೂಲಗಳು, ಪ್ರಮುಖ ಬಂದರುಗಳು ಮತ್ತು ವಿಶ್ವದರ್ಜೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕಾರಣಕ್ಕೆ ಮೆರಿಟೈಮ್ ವಿವಿ ಸ್ಥಾಪನೆಗೆ ಸೂಕ್ತ ಸ್ಥಳ ಮಂಗಳೂರು ಎಂದು ಸಂಸದರು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.


ಪ್ರಧಾನಮಂತ್ರಿಯವರ “ಮೆರಿಟೈಮ್ ಅಮೃತ್ ಕಾಲ್ ವಿಷನ್ 2047′ ಕನಸನ್ನು ನನಸಾಗಿಸುವಲ್ಲಿ ಬಂದರು ಮತ್ತು ಕಡಲ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸಲಿದೆ. ಜತೆಗೆ ಮೆರೀನ್ ಎಂಜಿನಿಯರಿಂಗ್, ಕಡಲ ಕಾನೂನು, ಬಂದರು ಮತ್ತು ಟರ್ಮಿನಲ್ ನಿರ್ವಹಣೆ ಮತ್ತು ಕಡಲ ಮಾಹಿತಿ ತಂತ್ರಜ್ಞಾನದಂತಹ ವಿಷಯಗಳಲ್ಲಿ ಭವಿಷ್ಯಕ್ಕೆ ವೃತ್ತಿಪರರನ್ನು ಸೃಷ್ಟಿಸಲು ಈ ವಿಶ್ವವಿದ್ಯಾಲಯವು ನಿರ್ಣಾಯಕ ಪಾತ್ರ ವಹಿಸಲಿದೆ.
ಈ ವಿವಿ ಗೆ ವೀರ ವನಿತೆ ಅಬ್ಬಕ್ಕ ರಾಣಿ ಎಂಬ ಹೆಸರು ಅತ್ಯಂತ ಸೂಕ್ತ. 2025ರಲ್ಲಿ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆ ನಡೆಯುತ್ತಿದ್ದು, ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಅವರಿಗೆ ಸಲ್ಲಿಸುವ ಗೌರವ ಎಂದು ಉಲ್ಲೇಖೀಸಲಾಗಿದೆ. ಮಂಗಳೂರಿನಲ್ಲಿ ಸುಸಜ್ಜಿತ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಇಲಾಖೆಯ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರಿಗೂ ಮನವಿ ಮಾಡಲಾಗಿದೆ ಎಂದು ಸಂಸದರ ಪ್ರಕಟನೆ ತಿಳಿಸಿದೆ.






