Published
7 months agoon
By
Akkare News
ಬೆಂಗಳೂರು: ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಮಹಾದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪ್ರಮಾಣ ಮಾಡುವಂತೆ ಕೇಳಿದ್ದ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ ಅವರು, “ನಾನು ಈಗಾಗಲೇ ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಮತ ಕಳ್ಳತನದ ಬಗ್ಗೆ ಸಮಗ್ರ ವರದಿ ನೀಡಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿನ ಮತದಾರರ ಪಟ್ಟಿಯಲ್ಲೂ ಗೊಂದಲಗಳಿವೆ ಎಂದು ಉಲ್ಲೇಖಿಸಿ, ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕದ ಒಂದು ಕೋಟಿ ಹೊಸ ಮತದಾರರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ರಕ್ಷಣೆ ಕೆಲಸವನ್ನು ಮಾಡಿದ್ದೇವೆ. ಈ ಒಂದು ಪವಿತ್ರವಾದ ಗ್ರಂಥದಲ್ಲಿ ಭಾರತದ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಈ ಸಂವಿಧಾನದಲ್ಲಿ ಅಂಬೇಡ್ಕರ್, ಮಹಾತ್ಮಾಗಾಂಧಿ ಜವಾಹರ ಲಾಲ್ ನೆಹರು ಅವರ ಧ್ವನಿ ಇದರಲ್ಲಿ ಕೇಳಿ ಬರುತ್ತದೆ. ಅಷ್ಟು ಮಾತ್ರವಲ್ಲದೇ ಬಸವಣ್ಣ, ಪುಲೆ ಮುಂತಾದ ಎಲ್ಲರ ಧ್ವನಿ ಕೇಳಿ ಬರುತ್ತದೆ ಎಂದು ಅವರು ತಿಳಿಸಿದರು.
ಈ ನಮ್ಮ ಗ್ರಂಥದ ಮೂಲಭೂತ ಅಡಿಪಾಯವೆಂದರೆ ಒಬ್ಬ ವ್ಯಕ್ತಿಗೆ ಒಂದೇ ಮತದಾನದ ಹಕ್ಕು ಎನ್ನುವುದಾಗಿದೆ. ಪ್ರತಿಯೊಬ್ಬರ ಪ್ರಜೆಗೂ ಈ ಸಂವಿಧಾನದ ಮೂಲಕ ಒಂದೇ ಒಂದು ಮತದಾನದ ಹಕ್ಕು ಕೊಡುವಂತಹದ್ದಾಗಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಮೋದಿಯವರು ಈ ಸಂವಿಧಾನದ ಮೇಲೆ ಬೇರೆ ಬೇರೆ ಪ್ರಹಾರ ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಈ ಬಿಜೆಪಿಯವರು ದೇಶದ ವಿವಿಧ ಸಂಸ್ಥೆಗಳನ್ನು ಬಳಸಿಕೊಂಡು ಪ್ರಹಾರ ಮಾಡಿ ಸಂವಿಧಾನವನ್ನು ಮುಗಿಸುವ ಸಂಚು ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಮುಂದೆ ಒಂದು ಪ್ರಶ್ನೆ ಉದ್ಭವಿಸಿತು. ನಾವೇಕೆ ಸೋಲನ್ನು ಅನುಭವಿಸುತ್ತಿದ್ದೇವೆ ಎಂಬುದೇ ಆ ಪ್ರಶ್ನೆಯಾಗಿತ್ತು ಎಂದು ರಾಹುಲ್ ಹೇಳಿದರು.
ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ನಡೆದ ಬೆನ್ನಲ್ಲೆ ವಿಧಾನಸಭೆ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯ ನಂತರದ ನಡೆದ ಮಹಾರಾಷ್ಟದ ವಿಧಾನಸಭೆಯ ಚುನಾವಣೆಯಲ್ಲಿ ನಾವು ಸೋಲು ಅನುಭವಿಸಿದೆವು. ಈ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆ ನಡೆದ ನಂತರ ನಡೆದಿದೆ. ಅಂದರೆ ಕೇವಲ 4 ತಿಂಗಳ ಅಂತರದಲ್ಲಿ ನಡೆದ ವಿಧಾನಸಭ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ! ಇದು ಹೇಗೆ ಎಂಬುದೇ ನಮ್ಮ ಪ್ರಶ್ನೆಯಾಗಿತ್ತು ಎಂದು ರಾಹುಲ್ ತಿಳಿಸಿದರು.