Published
6 months agoon
By
Akkare Newsಬೆಂಗಳೂರು: ಜಾತಿ ಜನಗಣತಿಗೆ ಸಂಬಂಧ ಗೊಂದಲ ನಿವಾರಣೆಯಾಗಿದ್ದು, ನಿಗದಿಯಂತೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕೈಗೊಳ್ಳಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶದ ಮೂಲಕ ಸಮೀಕ್ಷೆ ನಡೆಯುವ ಗೊಂದಲಕ್ಕೆ ತೆರೆ ಬಿದ್ದಿದೆ. ಸಮೀಕ್ಷೆಯ ಜಾತಿಪಟ್ಟಿಯಲ್ಲಿ ಹೆಚ್ಚುವರಿ ಜಾತಿ ಸೇರ್ಪಡೆಗೊಳಿಸಿರುವ ಕಾರಣ ಕೆಲ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜಾತಿ ಗೊಂದಲ ನಿವಾರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ, ಸಮೀಕ್ಷೆಯನ್ನು ಮುಂದೂಡುವಂತೆ ಹಲವು ಸಚಿವರು ಒತ್ತಡ ಹೇರಿದ್ದರು. ಹೀಗಾಗಿ, ಜಾತಿ ಗಣತಿ ಮುಂದೂಡಿಕೆಯಾಗುವ ಮಾತುಗಳು ಕೇಳಿ ಬಂದಿತ್ತು. ಆದರೆ, ರಾಜ್ಯ ಸರ್ಕಾರ ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದೆ.

ಶುಕ್ರವಾರ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಗೊಂದಲ ನಿವಾರಿಸಲು ಸೂಚಿಸಲಾಗಿತ್ತು. ವೀರಶೈವ ಲಿಂಗಾಯತ ಸಮುದಾಯದವರು ಜಾತಿ ಪಟ್ಟಿ ನೀಡಿದ್ದು, ಅದರ ಅನ್ವಯ ಜಾತಿ ಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಲಾಗಿದೆ.


ಅದೇ ರೀತಿ ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಕಾಲಂನ್ನೂ ಕೈಬಿಡುವ ಬಗ್ಗೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಗೊಂದಲ ಇದ್ದರೆ ಸಾರ್ವಜನಿಕರು ಇತರೆ ಕಾಲಂನಲ್ಲಿ ಜಾತಿ ಉಲ್ಲೇಖ ಮಾಡಲಿ. ಬಳಿಕ ಟ್ಯಾಬುಲೇಷನ್ ವೇಳೆ ಅವುಗಳನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಜಾತಿ ಪಟ್ಟಿಯನ್ನು ಪರಿಷ್ಕರಿಸಿ, ಸಮೀಕ್ಷೆ ಆ್ಯಪ್ನಲ್ಲಿ ಸೂಕ್ತ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ.




