Connect with us

ಇತರ

ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ಕನ್ನಡದಲ್ಲೂ ಐಎಎಸ್- ಐಪಿಎಸ್ ಬರೆಯಿರಿ ಕುರಿತು ಮೆಚ್ಚುಗೆ

Published

on

ಪುತ್ತೂರು, ಜನವರಿ 3:ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (Additional SP) ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ, “ಕನ್ನಡದಲ್ಲಿಯೂ ಐಎಎಸ್–ಐಪಿಎಸ್ ಪರೀಕ್ಷೆ ಬರೆಯಬಹುದು” ಎಂಬ ಅರಿವು ಮೂಡಿಸುವ ಅಭಿಯಾನದ ಮೂಲಕ 40,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿರುವ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.

ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಅವರು 1994ರಲ್ಲಿ ಸಬ್‌ ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದು, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಪಿಎಸ್‌ಐ, ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 32 ವರ್ಷಗಳ ಪ್ರಾಮಾಣಿಕ ಹಾಗೂ ನಿಷ್ಠಾವಂತ ಸೇವೆಯನ್ನು ಗುರುತಿಸಿ 2024ರಲ್ಲಿ ಅವರಿಗೆ *ರಾಷ್ಟ್ರಪತಿ ಪದಕ* ನೀಡಿ ಗೌರವಿಸಲಾಗಿದೆ.

ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದವರಾದ ಅವರು ಕನ್ನಡ ಸಾಹಿತ್ಯದ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಆಳವಾದ ಕಾಳಜಿ ಇರುವುದರೊಂದಿಗೆ, ಪ್ರಕೃತಿ ಸೌಂದರ್ಯವನ್ನು ಛಾಯಾಚಿತ್ರಗಳ ಮೂಲಕ ಸೆರೆಹಿಡಿಯುವಲ್ಲಿ ಉತ್ತಮ ಪರಿಣತಿಯನ್ನು ಹೊಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಾಗರಾಧನೆ–ದೈವಾರಾಧನೆ, ತುಳುನಾಡಿನ ಜನಜೀವನದ ಬಗ್ಗೆ ಅಪಾರ ಗೌರವ ಹೊಂದಿರುವ ಅವರು, ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಅಹಂಕಾರವಿಲ್ಲದೆ ತಮ್ಮ ವೃತ್ತಿಜೀವನದ ಪ್ರತಿಯೊಂದು ಅನುಭವವನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಧ್ಯಯನಶೀಲ ವ್ಯಕ್ತಿತ್ವದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊತ್ತೂರು ಉಮೇಶ್ ನಾಯಕ್ ಅವರು ಕನ್ನಡದ ಪೇಟ, ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜಾ, ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತಿದಾರರಾದ ದರ್ಶನ್ ಗರ್ತಿಕೆರೆ, ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಡಾ. ಹರ್ಷಕುಮಾರ್ ರೈ, ಸಚಿನ್ ಟ್ರೇಡಿಂಗ್ ಕಂಪನಿಯ ಮಾಲಕರಾದ ಉದ್ಯಮಿ ಮಂಜುನಾಥ್ ನಾಯಕ್ ಹಾಗೂ ಸಚಿನ್ ನಾಯಕ್ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement