Published
3 weeks agoon
By
Akkare News
ಹೊಸದಿಲ್ಲಿ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಸೋಮವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಸಾಮಾಜಿಕ, ಮಾನವೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿ ಸಂಬಂಧಿತ ಹಲವು ಪ್ರಮುಖ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತೂ ಅಭಿಪ್ರಾಯ ವಿನಿಮಯವಾಯಿತು ಎಂದು mediaoneonline.com ವರದಿ ಮಾಡಿದೆ.


ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, “ಮಾನವೀಯತೆಯೊಂದಿಗೆ” ಎಂಬ ವಿಷಯದ ಅಡಿಯಲ್ಲಿ ಇತ್ತೀಚೆಗೆ ಕೈಗೊಂಡ ಕೇರಳ ಯಾತ್ರೆಯ ವೇಳೆ ಸಮಾಜದ ವಿವಿಧ ವರ್ಗಗಳಿಂದ ಹೊರಹೊಮ್ಮಿದ ಬೇಡಿಕೆಗಳು, ಕಳವಳಗಳು ಮತ್ತು ವಿನಂತಿಗಳನ್ನು ಪ್ರಧಾನ ಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. ಮುಂಬರುವ ಪವಿತ್ರ ರಮಝಾನ್ ಮಾಸದ ಸಂದೇಶವನ್ನೂ ಇದೇ ಸಂದರ್ಭದಲ್ಲಿ ಹಂಚಿಕೊಂಡಿರುವುದಾಗಿ ಅವರು ಉಲ್ಲೇಖಿಸಿದ್ದಾರೆ.

ಸಭೆಯಲ್ಲಿ ಜಂಇಯ್ಯತುಲ್ ಉಲಮಾ ಹಾಗೂ ಮರ್ಕಝ್ ನೇತೃತ್ವದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಬಗ್ಗೆ ತಮಗೆ ಬಹಳ ನಿಕಟ ಅರಿವು ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂತಹ ಉಪಕ್ರಮಗಳು ಸಾಮಾಜಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯ ಅಗತ್ಯತೆ, ಆರ್ಥಿಕ ಬೆಳವಣಿಗೆಯೊಂದಿಗೆ ಮಾನವ ಅಭಿವೃದ್ಧಿ ಸೂಚ್ಯಂಕಗಳಿಗೆ ಆದ್ಯತೆ ನೀಡುವ ಮಹತ್ವ, ಜನಸಂಖ್ಯಾ ಅನುಪಾತ ಹಾಗೂ ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಸಂಪನ್ಮೂಲಗಳ ಸಮಾನ ಹಂಚಿಕೆಯ ಅಗತ್ಯತೆ ಕುರಿತೂ ಚರ್ಚೆ ನಡೆಯಿತು. ವಕ್ಫ್ ಹಾಗೂ ಎಸ್ಐಆರ್ ಗೆ ಸಂಬಂಧಿಸಿದ ಕಾಳಜಿಗಳು, ಐತಿಹಾಸಿಕ ಮಸೀದಿಗಳು ಮತ್ತು ಇಸ್ಲಾಮಿಕ್ ಪರಂಪರೆಯ ಸ್ಮಾರಕಗಳ ಸಂರಕ್ಷಣೆ, ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್ ಸೇರಿದಂತೆ ಅಲ್ಪಸಂಖ್ಯಾತರ ಶಿಕ್ಷಣ ಕಲ್ಯಾಣ ಯೋಜನೆಗಳ ಮರುಸ್ಥಾಪನೆ ಕುರಿತೂ ವಿಷಯ ಪ್ರಸ್ತಾಪಿಸಲಾಯಿತು.

ಉತ್ತರ ಭಾರತದ ಮುಬಾರಕ್ಪುರ್ ಜಾಮಿಯಾ ಅಶ್ರಫಿಯ್ಯಾ ಸೇರಿದಂತೆ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು, ಬರೇಲಿ ಘಟನೆ ಸೇರಿದಂತೆ ಅಮಾಯಕರಿಗೆ ನ್ಯಾಯ ಒದಗಿಸುವುದು, ದಕ್ಷಿಣ ಭಾರತದ ಪ್ರಮುಖ ಯಾತ್ರಾ ಕೇಂದ್ರಗಳನ್ನು ಸಂಪರ್ಕಿಸುವ ರೈಲು ಸೇವೆಗಳ ಪ್ರಸ್ತಾಪ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಲಪ್ಪುರಂ ಕೇಂದ್ರದ ಅಭಿವೃದ್ಧಿ ಹಾಗೂ ದೇಶದ ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಕೇಂದ್ರ ಸರ್ಕಾರ ನಿಕಟವಾಗಿ ತೊಡಗಿಸಿಕೊಳ್ಳುವ ಅಗತ್ಯತೆಯನ್ನು ಭೇಟಿಯ ವೇಳೆ ಉಲ್ಲೇಖಿಸಲಾಯಿತು.

ಸಭೆಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಎಸ್ ವೈ ಎಸ್ ಅಧ್ಯಕ್ಷ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಹಾಗೂ ಮರ್ಕಝ್ ನಾಲೆಜ್ ಸಿಟಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.





