Published
4 hours agoon
By
Akkare News
ಬೆಂಗಳೂರು::ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ದೈಹಿಕ ಚಟುವಟಿಕೆ ಹಾಗೂ ಏಕಾಗ್ರತೆಯ ಕೊರತೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಮಕ್ಕಳನ್ನು ಮೊಬೈಲ್ ಮೋಹದಿಂದ ಹೊರ ತರುವ ಆಶಯದಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ಕಡ್ಡಾಯವಾಗಿ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆ ಓದಿಸಲು ಮುಂದಾಗಿದೆ.

ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ವಸತಿ ಶಾಲೆಗಳು, ನಿಲಯಗಳು, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಪ್ರಾರ್ಥನೆ ಬಳಿಕ 10-15 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆಗಳನ್ನು ಓದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಮಕ್ಕಳು ಇಂಟರ್ನೆಟ್ ಶಿಕ್ಷಣ, ಮನರಂಜನೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯಾವಕಾಶ ನೀಡುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ, ಶ್ರವಣ ದೋಷ ಮತ್ತು ದೈಹಿಕ ಚಟುವಟಿಕೆಯಲ್ಲಿ ಆಸಕ್ತಿ ಇಲ್ಲದಿರುವ ಲಕ್ಷಣಗಳು ಕಂಡು ಬರುತ್ತಿದೆ. ಆದ್ದರಿಂದ ಇದರ ನಿಯಂತ್ರಣಕ್ಕಾಗಿ ಶಾಲೆಗಳಲ್ಲಿ ನಿತ್ಯವೂ ಕನಿಷ್ಠ 10ರಿಂದ 15 ನಿಮಿಷಗಳವರೆಗೆ ಕನ್ನಡ ದಿನಪತ್ರಿಕೆಗಳನ್ನು ಓದಲು ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲಾ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿತ್ತು.
‘
ಈ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ತಕ್ಷಣದಿಂದ ಜಾರಿಗೆ ಬರುವಂತೆ ಶಾಲೆಗಳಲ್ಲಿ 10ರಿಂದ 15 ನಿಮಿಷ ದಿನಪತ್ರಿಕೆ ಓದನ್ನು ಕಡ್ಡಾಯಗೊಳಿಸಿದೆ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಮುಂದಿನ ವರ್ಷದ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ದಿನ ಪತ್ರಿಕೆ ಓದಲು ಸಮಯ ನಿಗದಿ ಮಾಡಿ ದೈನಂದಿನ ಅವಧಿ ಹಂಚಿಕೆ ಮಾಡಲಾಗುತ್ತದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿತ್ತು. ರಾಜಸ್ಥಾನದಲ್ಲೂ ಶಾಲೆಗಳಲ್ಲಿ ಇದೇ ನಿಯಮ ಜಾರಿ ಮಾಡಲಾಗಿದೆ. ಕೇರಳದಲ್ಲಿಯೂ ಅಲ್ಲಿನ ಸರ್ಕಾರ ತನ್ನ ಶಾಲಾ ಕೊಠಡಿಗಳಲ್ಲಿ ದಿನಪತ್ರಿಕೆಗಳನ್ನು ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ಜಾರಿಗೆ ತಂದಿದೆ. ಪತ್ರಿಕೆ ಓದುವುದು ಅಲ್ಲಿನ ಶೈಕ್ಷಣಿಕ ಮೌಲ್ಯಮಾಪನದ ಒಂದು ಭಾಗವಾಗಿದೆ.





