Connect with us

ರಾಜಕೀಯ

ತಮಿಳುನಾಡು ಮುಖ್ಯಮಂತ್ರಿ ಆಗಿ ವಿಜಯ್ ಅಧಿಕಾರ ಸ್ವೀಕಾರ ಉಚಿತ ವಿದ್ಯುತ್ ಭ್ರಷ್ಟಾಚಾರ ಮುಕ್ತ ಮಹಿಳಾ ರಕ್ಷಣಾ ಪಡೆ ವಿಜಯ್ ಘೋಷಣೆ

Published

on

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿದ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್‌, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತಾರೂಢ ಡಿಎಂಕೆ ವಿರುದ್ಧ ಸಮರ ಸಾರಿದ್ದಾರೆ. ತಮ್ಮ ಚೊಚ್ಚಲ ಭಾಷಣದಲ್ಲೇ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಶೀಘ್ರದಲ್ಲೇ ‘ಶ್ವೇತಪತ್ರ’ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
“ನಾನು ಇಂದು ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆಯನ್ನು ಹೊತ್ತಿರುವ ರಾಜ್ಯದ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಸಾರ್ವಜನಿಕರಿಗೆ ರಾಜ್ಯದ ನೈಜ ಹಣಕಾಸು ಸ್ಥಿತಿಗತಿಯನ್ನು ತಿಳಿಸುವುದು ನನ್ನ ಆದ್ಯ ಕರ್ತವ್ಯ. ಹೀಗಾಗಿ, ನಾವು ಪಾರದರ್ಶಕವಾಗಿ ಶ್ವೇತಪತ್ರವನ್ನು ಜನರ ಮುಂದಿಡಲಿದ್ದೇವೆ,” ಎಂದು ವಿಜಯ್‌ ತಿಳಿಸಿದರು. ಕೇವಲ ಸುಳ್ಳು ಭರವಸೆಗಳ ಮೂಲಕ ಜನರನ್ನು ದಾರಿತಪ್ಪಿಸುವ ರಾಜಕಾರಣಕ್ಕೆ ತಾವು ಅಂತ್ಯ ಹಾಡುವುದಾಗಿ ಅವರು ಸ್ಪಷ್ಟಪಡಿಸಿದರು.

 ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರುವ ಇಚ್ಛೆ ವ್ಯಕ್ತಪಡಿಸಿದ ಅವರು, “ಇದು ನನ್ನ ಒಬ್ಬನ ಸರ್ಕಾರವಲ್ಲ, ಇದು ಜನರ ಸರ್ಕಾರ. ಸರ್ಕಾರದ ಪ್ರತಿಯೊಂದು ನಿರ್ಧಾರವೂ ಜನರಿಗೆ ತಿಳಿಯುವಂತಿರಬೇಕು. ಅಧಿಕಾರ ಎಂಬುದು ಕೇವಲ ಗದ್ದಿಗೆಯಲ್ಲ, ಅದು ಸಾರ್ವಜನಿಕ ಸೇವೆಯ ಜವಾಬ್ದಾರಿ,” ಎಂದು ಮಾರ್ಮಿಕವಾಗಿ ನುಡಿದರು.

ಹೊಸ ಸರ್ಕಾರಕ್ಕೆ ವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದ ಮುಖ್ಯಮಂತ್ರಿ ವಿಜಯ್‌, ರಾಜ್ಯದಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕುವುದೇ ತಮ್ಮ ಮೊದಲ ಗುರಿ ಎಂದು ಭರವಸೆ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version