Connect with us

ರಾಜಕೀಯ

ಮ್ಯಾಜಿಕ್ ನಂಬರ್ ದಾಟಿದ ವಿಜಯ್ ಮೈತ್ರಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗುವ ಕನಸು ನನಸು

Published

on

ತಮಿಳುನಾಡು ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ‘ಯಾರು ಸಿಎಂ?’ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ, ಈಗ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪುವಲ್ಲಿ ಯಶಸ್ವಿಯಾಗಿದೆ.

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 118 ಶಾಸಕರ ಬೆಂಬಲ ಅಗತ್ಯವಿತ್ತು. ವಿಜಯ್ ಅವರ ಪಕ್ಷಕ್ಕೆ 10 ಸ್ಥಾನಗಳ ಕೊರತೆಯಿತ್ತು. ಈ ಹಿಂದೆ ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ಘೋಷಿಸಿತ್ತು. ಇದೀಗ ಉಳಿದ 5 ಶಾಸಕರ ಬೆಂಬಲವೂ ವಿಜಯ್ ಅವರಿಗೆ ಲಭ್ಯವಾಗಿದೆ. ವಿಸಿಕೆ ಪಕ್ಷದ ಇಬ್ಬರು ಶಾಸಕರು, ಸಿಪಿಐ ಇಬ್ಬರು ಮತ್ತು ಸಿಪಿಐ (ಎಂ) ಪಕ್ಷದ ಇಬ್ಬರು ಶಾಸಕರು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಟಿವಿಕೆ ಕೂಟದ ಒಟ್ಟು ಬಲ 119ಕ್ಕೆ ಏರಿದ್ದು, ಬಹುಮತಕ್ಕಿಂತ ಒಂದು ಸ್ಥಾನ ಹೆಚ್ಚುವರಿಯಾಗಿ ದಕ್ಕಿದೆ.

ಬಹುಮತ ಸಾಬೀತುಪಡಿಸಲು ದಾಖಲೆಗಳಿಲ್ಲದ ಕಾರಣ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಈ ಹಿಂದೆ ಪ್ರಮಾಣವಚನಕ್ಕೆ ತಡೆ ಒಡ್ಡಿದ್ದರು. ಇದೀಗ ಎಲ್ಲ ಮಿತ್ರಪಕ್ಷಗಳ ಬೆಂಬಲ ಪತ್ರದೊಂದಿಗೆ ವಿಜಯ್ ಅವರು  ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಈ ವಾರದಲ್ಲಿ ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಮೂರನೇ ಸಭೆ ಇದಾಗಿದ್ದು, ಸರ್ಕಾರ ರಚನೆಯ ಹಕ್ಕನ್ನು ಅಧಿಕೃತವಾಗಿ ಮಂಡಿಸಲಿದ್ದಾರೆ.

ರಾಜ್ಯಪಾಲರಿಗೆ ಬೆಂಬಲಿತ ಶಾಸಕರ ಸಹಿ ಇರುವ ಪತ್ರವನ್ನು ಸಲ್ಲಿಸಿದ ಬಳಿಕ, ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಫಿಕ್ಸ್ ಆಗಲಿದೆ. ಬಹುಶಃ ಇದೇ ವಾರಾಂತ್ಯದಲ್ಲಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ದಶಕಗಳ ಕಾಲ ತಮಿಳುನಾಡನ್ನು ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯಕ್ಕೆ ಬ್ರೇಕ್ ಬಿದ್ದಂತಾಗಿದ್ದು, ನಟನೊಬ್ಬ ನೇರವಾಗಿ ರಾಜಕೀಯ ಪ್ರವೇಶಿಸಿ ಮೊದಲ ಪ್ರಯತ್ನದಲ್ಲೇ ಸಿಎಂ ಕುರ್ಚಿ ಏರುತ್ತಿರುವುದು ದೊಡ್ಡ ಇತಿಹಾಸವಾಗಿ ದಾಖಲಾಗಿದೆ.

   

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version