Published
2 hours agoon
By
Akkare News
ಪುತ್ತೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಗೌರವಾನ್ವಿತ ಜಸ್ಟಿಸ್ ಶ್ರೀ ಇಂದ್ರೇಶ್ ಅವರು ಇಂದು ಸಂಜೆ ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. 
ಈ ಸಂದರ್ಭದಲ್ಲಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಸದಾನಂದ ನಾಗಪ್ಪ ನಾಯ್ಕ್ ಅವರೂ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನ್ಯಾಯಮೂರ್ತಿಗಳನ್ನು ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಅರ್ಚಕರಾದ ಶ್ರೀ ಸದಾನಂದ ಭಟ್ ಅವರು ವಿಶೇಷ ಪೂಜೆಯನ್ನು ನೆರವೇರಿಸಿ, ನಿತ್ಯ ಪೂಜೆಯ ನಂತರ ಇಬ್ಬರೂ ನ್ಯಾಯಮೂರ್ತಿಗಳಿಗೆ ದೇವರ ಪ್ರಸಾದವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜಿ. ಜಗನ್ನಾಥ ರೈ ಹಾಗೂ ಸಮಿತಿಯ ಸದಸ್ಯರಾದ ಶ್ರೀ ರಾಧಾಕೃಷ್ಣ ಕಳ್ಳೂರಾಯ ಮತ್ತು ಶ್ರೀ ಐತಪ್ಪ ನಾಯ್ಕ್ ಉಪಸ್ಥಿತರಿದ್ದರು. ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಜೇ. ರೈ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಭಕ್ತರ ನಂಬಿಕೆ ಮತ್ತು ಧಾರ್ಮಿಕ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಪುಣ್ಯಕ್ಷೇತ್ರವಾಗಿದ್ದು, ಗಣ್ಯರ ಭೇಟಿ ಹಾಗೂ ಸೇವಾ ಕಾರ್ಯಗಳು ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.


