Connect with us

ಇತರ

ಪುತ್ತೂರಿನ ಗುಡ್ಡದಲ್ಲೆ ಮೈದಳೆದ ಭತ್ತ ಕೃಷಿ

Published

on

ಪುತ್ತೂರು :300ಕ್ಕೂ ಹೆಚ್ಚು ಅಪರೂಪದ ಸಸ್ಯ ತಳಿ ಸಂರಕ್ಷಕ ಬಿ.ಕೆ.ದೇವರಾಯ ಅವರ ಕಥೆಯನ್ನು ಸಾಮಾಜಿಕ ಜಾಲತಾಣದ ಮೂಲಕ ವೀಕ್ಷಿಸಿದ ಪುತ್ತೂರಿನ ಯುವಕನೋರ್ವ ತನ್ನೂರಿನ ಏರು ಗುಡ್ಡದ ತಪ್ಪಲಿನ ಅರ್ಧ ಎಕ್ರೆ ಸ್ಥಳದಲ್ಲಿ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದ ಕಥೆಯಿದು!
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ದರ್ಭೆ ನಿವಾಸಿ ಅನೀಶ್‌ ಈ ಸಾಧಕ. ರಾಸಾಯನಿಕ ರಹಿತ ಆಹಾರ ಬಳಕೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ತನ್ನ ಮನೆ ಬಳಕೆಗೋಸ್ಕರ ಭತ್ತ ಬೆಳೆದಿದ್ದು, ಇಲ್ಲಿ ಲಾಭ – ನಷ್ಟವನ್ನು ಲೆಕ್ಕ ಮಾಡದೆ ಪರಿಶುದ್ಧ ಅಕ್ಕಿ ಪಡೆಯುವ ಉದ್ದೇಶ ಹೊಂದಿದ್ದಾರೆ.

ಬಿರು ಬಿಸಿಲಿನಲ್ಲಿ ಬೆಳೆದು ನಿಂತ ಭತ್ತ
ದರ್ಭೆಯ ಮಹೇಶ್‌ ಡಿ.ಕೆ. ಅವರಿಗೆ ಸುಮಾರು 25 ಎಕ್ರೆಗಿಂತ ಅಧಿಕ ಕೃಷಿ ಭೂಮಿ ಇದೆ. ಅವರ ಪುತ್ರ ಅನೀಶ್‌ಗೆ ಕೃಷಿ ವಿಚಾರದಲ್ಲಿ ಆಸಕ್ತಿ ಹೆಚ್ಚು. ಈ ಏರು ಗುಡ್ಡದಲ್ಲಿ ಹತ್ತಾರು ಕೃಷಿ ಪ್ರಯೋಗ ಮಾಡಿದರೂ ಸಫ‌ಲವಾಗಿರಲಿಲ್ಲ. ಈ ಮಧ್ಯೆ ಬಿ.ಕೆ.ದೇವರಾಯರ ಕೃಷಿ ಕಥೆಯನ್ನು ಗಮನಿಸಿದ ಅನೀಶ್‌ ಭತ್ತದ ಕೃಷಿಯನ್ನು ಮಾಡಲು ಮುಂದಾದದರು. ಜೆಸಿಬಿ ಯಂತ್ರಗಳು ಏರಲು ಪರಿಶ್ರಮಪಡಬೇಕಾದಷ್ಟು ಕಡಿದಾದ ಗುಡ್ಡದಲ್ಲಿ ಭತ್ತ ಬೆಳೆಯಲು ಸಾಧ್ಯವೇ ಎಂದು ಹಲವರು ಪ್ರಶ್ನಿಸಿದ್ದಿದೆ. ಇದೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಅನೀಶ್‌ ಹಿಟಾಚಿ ತರಿಸಿ 300 ಗಂಟೆಗಳ ಕಾಲ ಕೆಲಸ ಮಾಡಿಸಿದರು. ಸಮತಟ್ಟಾದ ಬಳಿಕ ತಾನೇ ಟಿಲ್ಲರ್‌ ಖರೀದಿಸಿ ಅರ್ಧ ಎಕ್ರೆ ಸ್ಥಳವನ್ನು ಭತ್ತದ ಕೃಷಿಗೆ ಸಿದ್ಧಗೊಳಿಸಿದರು. ಎಂಒ-4 ತಳಿಯನ್ನು ನಾಟಿ ಮಾಡಿದ್ದು, 90 ದಿನ ಕಳೆದಿದೆ. ಇನ್ನು 30 ದಿನ ಕಳೆದರೆ ಫಸಲು ಸಿದ್ಧವಾಗಲಿದೆ.

 

 

ಹುಳಿ ಮಜ್ಜಿಗೆಯೇ ಮದ್ದು
ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಭತ್ತದ ಕೃಷಿ ಮಾಡುವುದು ಹೆಚ್ಚು. ಆದರೆ ಅನೀಶ್‌ ಡಿಸೆಂಬರ್‌ನಲ್ಲೇ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡಿದರು. ಎಳ್ಳಿನಷ್ಟೂ ರಾಸಾಯಿನಿಕ ಬಳಸಿಲ್ಲ. ಸಗಣಿ ಸ್ಲರಿ ನೀರೇ ಗೊಬ್ಬರ. ರೋಗ ತಡೆಗೆ ಆಯ್ದುಕೊಂಡ ಕ್ರಮವೂ ಪಕ್ಕಾ ಹಳ್ಳಿ ಶೈಲಿಯದು. 1 ಲೀಟರ್‌ ಗೋ ಮೂತ್ರವನ್ನು ಹತ್ತು ದಿನಗಳ ಕಾಲ ಇರಿಸಿ ಅನಂತರ ಅದನ್ನು ಹತ್ತು ಪಟ್ಟು ನೀರಿನಲ್ಲಿ ಬೆರೆಸಿ ಸಿಂಪಡಿಸುವುದು, ಹುಳಿ ಮಜ್ಜಿಗೆಯನ್ನು ಹತ್ತು ದಿನ ಇರಿಸಿ ಹತ್ತುಪಟ್ಟು ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಾರೆ. ಕಾಂಡಕಾರಕ ಹುಳ ಬಾಧೆ ತಡೆಗೆ ಗದ್ದೆಯ ಸುತ್ತಲೂ ಫೆರ್ಮುಂಡ್‌ ಟ್ರ್ಯಾಪ್ ಅನ್ನುವ ತಂತ್ರಗಾರಿಕೆಯನ್ನು ಅಳವಡಿಸಿದ್ದಾರೆ.

ಬೇಸಗೆಯಲ್ಲೂ ಗದ್ದೆಗೆ ಮಳೆ ನೀರು!
ಭತ್ತದ ಕೃಷಿ ಮಾಡಿದ ಗುಡ್ಡದ ಸ್ಥಳದಿಂದ ಇನ್ನಷ್ಟು ಎತ್ತರದಲ್ಲಿ ಬೃಹದಾಕಾರದ 14 ಲಕ್ಷ ಲೀಟರ್‌ ಸಾಮರ್ಥ್ಯದ ಮಳೆ ನೀರಿನ ಟ್ಯಾಂಕನ್ನು ಒಂದೂವರೆ ವರ್ಷ ಹಿಂದೆ ನಿರ್ಮಿಸಲಾಗಿದೆ. ಇದನ್ನು ಗುಡ್ಡಭಾಗದ ಕೃಷಿ ವ್ಯವಸ್ಥೆಗೆ ಬಳಕೆಗೆಂದೇ ಮೀಸಲಿಡಲಾಗಿದೆ. ಮಾರ್ಚ್‌ ಮೊದಲ ವಾರದಲ್ಲೂ 13 ಲಕ್ಷ ಲೀಟರ್‌ ನೀರಿದೆ. ಇಲ್ಲಿಂದ ಪೈಪ್‌ಲೈನ್‌ ಮೂಲಕ ಸ್ವಯಂಚಾಲಿತವಾಗಿ ಗದ್ದೆಗೆ ನೀರು ಹರಿಯುತ್ತದೆ. ಇದಕ್ಕೆ ಯಾವುದೇ ಪಂಪ್‌ ಅಗತ್ಯವಿಲ್ಲ. ಗದ್ದೆಯ ಮಧ್ಯ ಭಾಗಗಳಲ್ಲಿ ಸ್ಪಿಂಕ್ಲರ್‌ ಅಳವಡಿಸಿದ್ದು, ಗುಡ್ಡದ ಮೇಲ್ಭಾಗದ ಟ್ಯಾಂಕ್‌ನಿಂದ ಹರಿದು ಬರುವ ನೀರಿನ ವೇಗಕ್ಕೆ ಇದು ಕಾರ್ಯ ನಿರ್ವಹಿಸುತ್ತದೆ. ಈ ರೀತಿ ಸ್ಪಿಂಕ್ಲರ್‌ ಅಳವಡಿಸಿ ನೀರುಣಿಸುವ ಪದ್ಧತಿ ಈ ಭಾಗದಲ್ಲಿ ಅಪರೂಪ.

 

ಲಾಭ-ನಷ್ಟದ ಲೆಕ್ಕಾಚಾರ ಇಲ್ಲ
ಇದು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮಾಡಿದ್ದಲ್ಲ. ರಾಸಾಯನಿಕ, ವಿಷ ಮಿಶ್ರಿತ ಆಹಾರ ಸೇವನೆಯಿಂದ ದೂರ ಇರಬೇಕು ಎನ್ನುವ ಉದ್ದೇಶದಿಂದ ಬಿ.ಕೆ.ದೇವರಾಯ ಕೃಷಿ ಕಥನವನ್ನು ಆಲಿಸಿ ಮಾಡಿದ ಪ್ರಯೋಗ. ವರ್ಷದಲ್ಲಿ ಎರಡು ಬಾರಿ ಇದನ್ನು ಮಾಡುವ ಉದ್ದೇಶ ಇದೆ. ಮಧ್ಯಭಾಗದಲ್ಲಿ ಹಸಿರೆಲೆ ಗೊಬ್ಬರವನ್ನು ಅನುಷ್ಠಾನಿಸುವ ಯೋಚನೆ ಇದೆ. ಸಾವಯವ ಮಾದರಿಯನ್ನು ತರಕಾರಿ ಸಹಿತ ಬೇರೆ ಬೇರೆ ಕೃಷಿ ವ್ಯವಸ್ಥೆಗೂ ಬಳಸಿದ್ದೇವೆ.
ಅನೀಶ್‌ ಮತ್ತು ಮಹೇಶ್‌ ಡಿ.ಕೆ., ದರ್ಭೆ

 

 

Continue Reading
Click to comment

Leave a Reply

Your email address will not be published. Required fields are marked *

Advertisement