Connect with us

ಇತರ

ಎಸ್‌.ಐ ಆರ್ ನಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಆರೋಪ : ವಿಶ್ವಸಂಸ್ಥೆಯ ಮೂವರು ವಿಶೇಷ ವರದಿಗಾರರು ಭಾರತ ಸರ್ಕಾರಕ್ಕೆ ಪತ್ರ

Published

on

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ ಎಂಬ ಆರೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ವಿಶ್ವಸಂಸ್ಥೆಯ ಮೂವರು ವಿಶೇಷ ವರದಿಗಾರರು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೆ 1, 2026ರಂದು ಬರೆದಿರುವ ಪತ್ರದಲ್ಲಿ, ಅಲ್ಪಸಂಖ್ಯಾತರ ವಿಷಯಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು, ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉತ್ತೇಜನ ಮತ್ತು ರಕ್ಷಣೆ ಕುರಿತಾದ ವಿಶೇಷ ವರದಿಗಾರರು ಹಾಗೂ ಧರ್ಮ/ನಂಬಿಕೆಯ ಸ್ವಾತಂತ್ರ್ಯದ ಕುರಿತಾದ ವಿಶೇಷ ವರದಿಗಾರರು, ಮತದಾರರ ಪಟ್ಟಿ ಪರಿಷ್ಕರಣೆಯು ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದನ್ನು ಸೂಚಿಸುವ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಪತ್ರಕ್ಕೆ ಅಲ್ಪಸಂಖ್ಯಾತರ ವಿಷಯಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರ ನಿಕೋಲಸ್ ಲೆವ್ರಾಟ್, ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉತ್ತೇಜನ ಮತ್ತು ರಕ್ಷಣೆ ಕುರಿತಾದ ವಿಶೇಷ ವರದಿಗಾರ್ತಿ ಐರಿನ್ ಖಾನ್ ಹಾಗೂ ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಕುರಿತಾದ ವಿಶೇಷ ವರದಿಗಾರ್ತಿ ನಾಝಿಲಾ ಘನೇಯಾ ಅವರು ಸಹಿ ಹಾಕಿದ್ದಾರೆ. ವ್ಯಾಪಕ ಪ್ರಮಾಣದ ಹೆಸರುಗಳ ಅಳಿಸುವಿಕೆಯ ಕುರಿತು ಮಾತನಾಡುತ್ತಾ, ಆ ಪತ್ರದಲ್ಲಿ ಸೂಕ್ತವಾದ ಗುರುತಿನ ಚೀಟಿಗಳನ್ನು ಒದಗಿಸಿದ್ದಾಗ್ಯೂ ಕೂಡ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ತಿಳಿಸಲಾಗಿದೆ. “ಎಸ್‌ಐಆರ್ ಪ್ರಕ್ರಿಯೆಯಿಂದ ಮುಸ್ಲಿಂ ಮತದಾರರು ಅತಿ ಹೆಚ್ಚು ಪ್ರಮಾಣದಲ್ಲಿ ತೊಂದರೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ನಂದಿಗ್ರಾಮ್ ಎಂಬ ಒಂದು ಕ್ಷೇತ್ರದಲ್ಲಿ, ಮುಸ್ಲಿಮರು ಆ ಕ್ಷೇತ್ರದ ಒಟ್ಟು ಮತದಾರರಲ್ಲಿ ಕೇವಲ ಶೇಕಡಾ 25 ರಷ್ಟು ಮಾತ್ರ ಇದ್ದಾಗ್ಯೂ, ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ ಮತದಾರರಲ್ಲಿ ಶೇಕಡಾ 95 ರಷ್ಟು ಮುಸ್ಲಿಮರಾಗಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, “ಎಸ್‌ಐಆರ್ ಪ್ರಕ್ರಿಯೆಯಿಂದ ಮುಸ್ಲಿಂ ಮತದಾರರ ಮೇಲೆ ಅಸಮಾನವಾದ ಪರಿಣಾಮ ಬೀರಿದೆ ಎಂದು ವರದಿಯಾಗಿದೆ” ಎಂದು ಹೇಳಲಾಗಿದೆ. ಮತದಾರರ ದತ್ತಾಂಶದಲ್ಲಿನ (ಡೇಟಾ) ‘ಅಕ್ರಮಗಳನ್ನು’ ಗುರುತಿಸಲು ಪರಿಷ್ಕರಣಾ ಪ್ರಕ್ರಿಯೆಯ ಸಮಯದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲಾಗಿದೆ ಎಂದು ವರದಿಯಾಗಿರುವುದರ ಬಗ್ಗೆಯೂ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇದು “ಪಾರದರ್ಶಕತೆ, ದೋಷಗಳು ಮತ್ತು ಸಂಭಾವ್ಯ ಪಕ್ಷಪಾತದ ಕುರಿತು ಕಳವಳವನ್ನು ಮೂಡಿಸಿದೆ” ಎಂದು ತಿಳಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ವ್ಯವಸ್ಥೆಗಳ ಬಳಕೆಯು ಕಾನೂನುಬದ್ಧ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯವನ್ನು ಹೊಂದಿದೆ, ಪ್ರಜಾಪ್ರಭುತ್ವದ ನ್ಯಾಯಸಮ್ಮತತೆಯನ್ನು ಕುಂದಿಸುತ್ತದೆ ಮತ್ತು ಇಂತಹ ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ಸ್ವಯಂಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪರಿಷ್ಕರಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸರ್ಕಾರದ ಹಿರಿಯ ನಾಯಕರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಬಗ್ಗೆಯೂ ವಿಶ್ವಸಂಸ್ಥೆಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು “ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು” ಗುರಿಯಾಗಿಸಿಕೊಂಡು ಮಾಡಲಾಗುತ್ತಿದೆ ಎಂದು ಬಿಂಬಿಸುವ ರಾಜಕೀಯ ಭಾಷಣಗಳು, ಭಾರತೀಯ ಮುಸ್ಲಿಂ ನಾಗರಿಕರನ್ನು ವಿದೇಶಿ ಪ್ರಜೆಗಳೊಂದಿಗೆ ಸೇರಿಸುವ ಅಪಾಯವನ್ನು ಹೊಂದಿವೆ ಮತ್ತು ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಡಿಯಲ್ಲಿ ತಾರತಮ್ಯದ ಭಾಷಣಕ್ಕೆ ಸಮನಾಗುತ್ತದೆ ಎಂದು ಹೇಳಿದ್ದಾರೆ. ಈ ಅಧಿಕೃತ ಪತ್ರ ಮತ್ತು ಇದಕ್ಕೆ ಭಾರತ ಸರ್ಕಾರ ನೀಡುವ ಯಾವುದೇ ಪ್ರತಿಕ್ರಿಯೆಯನ್ನು 60 ದಿನಗಳ ನಂತರ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು, ಅಥವಾ ಒಂದು ವೇಳೆ ಸರ್ಕಾರವು ಅದಕ್ಕಿಂತ ಮುಂಚಿತವಾಗಿಯೇ ಉತ್ತರಿಸಿದರೆ ತಕ್ಷಣವೇ ಬಹಿರಂಗಪಡಿಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಮತದಾರರ ಪಟ್ಟಿಗಳಿಂದ ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಕೈಬಿಡುವಲ್ಲಿ ಭಾರತೀಯ ಚುನಾವಣಾ ಆಯೋಗದ (ಇಸಿಐ) ಪಾತ್ರ ಹಾಗೂ ಎನ್‌ಆರ್‌ಸಿ ಕುರಿತು ಕಳವಳ ವ್ಯಕ್ತಪಡಿಸಿ ವಿಶ್ವಸಂಸ್ಥೆಯ ವರದಿಗಾರರು ಈ ಹಿಂದೆ 2018ರಲ್ಲೂ ಪತ್ರ ಬರೆದಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement