Published
10 months agoon
By
Akkare News
ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಮಗು ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಪುತ್ತೂರು ನ್ಯಾಯಾಲಯದಲ್ಲಿ ಸಂತ್ರಸ್ತೆ, ಮಗು ಹಾಗೂ ಆರೋಪಿಯ ರಕ್ತದ ಮಾದರಿ ಸಂಗ್ರಹ ಕಾರ್ಯ ಮಂಗಳವಾರ ನಡೆದಿದೆ.


ಮಂಗಳೂರು ಜೈಲಿನಲ್ಲಿರುವ ಆರೋಪಿ ಶ್ರೀಕೃಷ್ಣ ಜೆ.ರಾವ್ನನ್ನು ಮಂಗಳವಾರ ಮಧ್ಯಾಹ್ನ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭ ಸಂತ್ರಸ್ತ ಯುವತಿ, ಮಗು ಹಾಗೂ ಯುವತಿಯ ತಾಯಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಧೀಶರ ಮುಂದೆ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಯುವತಿ, ಮಗು ಹಾಗೂ ಆರೋಪಿಯ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಇದು ಪ್ರಕರಣದ ತನಿಖೆಗೆ ನಿರ್ಣಾಯಕವಾಗಿದೆ.
ಬೆಂಗಳೂರಿಗೆ ಸ್ಯಾಂಪಲ್:
ನ್ಯಾಯಾಲಯದಲ್ಲಿ ಸಂಗ್ರಹಿಸಿದ ರಕ್ತದ ಮಾದರಿಯನ್ನು ಡಿಎನ್ಎ ಪರೀಕ್ಷೆಗೋಸ್ಕರ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮೂವರ ಮಾದರಿಗಳನ್ನು ಮಹಿಳಾ ಠಾಣೆ ಪೊಲೀಸ್ ಸಿಬ್ಬಂದಿ ಬಸ್ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಡಿಎನ್ಎ ವರದಿಯನ್ನು ತಿರುಚಬಹುದು ಎಂಬ ಆತಂಕ ಈ ಹಿಂದೆಯೇ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ತಾಯಿಯೂ ಅವರ ಜತೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಚಾರ್ಜ್ಶೀಟ್ ಸಲ್ಲಿಕೆ
ಈ ಪ್ರಕರಣದಲ್ಲಿ ೬೦ ದಿನದ ಒಳಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೊದಲ ಹಂತದ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ಇದಕ್ಕೆ ನ್ಯಾಯಾಲಯದ ನಂಬರಿಂಗ್ ಬಾಕಿಯಿದೆ ಎಂದು ಹೇಳಲಾಗಿದೆ. ಹೆಚ್ಚುವರಿ ಮಾಹಿತಿಗಳಿದ್ದಲ್ಲಿ ಚಾರ್ಜ್ ಶೀಟ್ಗೆ ಮತ್ತೆ ಸೇರ್ಪಡೆಯಾಗುವ ಸಾಧ್ಯತೆಗಳಿದೆ.




‘ಪ್ರಕರಣ ಹಿನ್ನೆಲೆ
ಆರೋಪಿ ಶ್ರೀಕೃಷ್ಣ ಜೆ.ರಾವ್ ಸಹಪಾಠಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಯುವತಿ ಗರ್ಭವತಿಯಾದಾಗ ಮದುವೆಗೆ ನಿರಾಕರಿಸಿದ್ದ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯು ಜೂ.೨೭ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ ಜೈಲಿನಲ್ಲೇ ಉಳಿಯುವಂತಾಗಿದೆ.







