Published
3 hours agoon
By
Akkare News
ಮಂಗಳೂರು, ಮಾ.13: ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ, ಆಗುವುದೂ ಇಲ್ಲ. 25 ದಿನಗಳಿಗೆ ಒಂದು ಸಿಲಿಂಡರ್ ಪೂರೈಕೆಯ ನಿಯಮದಂತೆ ಸಿಲಿಂಡರ್ ಪೂರೈಕೆಯಾಗುತ್ತಿದ್ದು, ಗಾಬರಿಗೊಂಡು ಎರಡೆರಡು ಬುಕ್ ಮಾಡಬೇಕಾಗಿಲ್ಲ. ಅದಕ್ಕೆ ಅವಕಾಶವೂ ಇಲ್ಲ ಎಂದು ದ.ಕ.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಏಜೆನ್ಸಿಗಳು ದಾಸ್ತಾನು ಕೇಂದ್ರಗಳಲ್ಲಿ ಹೆಚ್ಚುವರಿ ಶೇಖರಣೆ ಮಾಡಿಟ್ಟುಕೊಳ್ಳದಂತೆ ಕಠಿಣ ಕ್ರಮ ವಹಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯ ದಾಸ್ತಾನು ಕೇಂದ್ರಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಎಲ್ಲಾ ಜನರಲ್ ಮ್ಯಾನೇಜರ್ ಹಾಗೂ ಇತರ ಪ್ರಮುಖರ ಜತೆ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಪೂರೈಕೆ ಮಾತ್ರವಲ್ಲ, ಹೈದರಾಬಾದ್, ತಮಿಳುನಾಡು ಇಲ್ಲಿಂದ ಸಪ್ಲೈ ಹೋಗುವವಲ್ಲಿಯೂ ಪೂರೈಕೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ.
ಎಂಆರ್ಪಿಎಲ್ನಿಂದಲೂ ಎಲ್ಪಿಜಿ ಪೂರೈಕೆ ಆಗುತ್ತಿದ್ದು, ಅವರ ಉತ್ಪಾದನೆಯೂ ಕಡಿಮೆ ಆಗಿಲ್ಲ ಎಂಬ ಮಾಹಿತಿ ಅಲ್ಲಿನ ಆಡಳಿತ ನಿರ್ದೇಶಕರಿಂದಲೇ ದೊರಕಿದೆ. ಐಒಸಿಎಲ್ಗೆ ಆಗಬೇಕಾದ ಎಲ್ಪಿಜಿಯೂ ಆಮದಾಗುತ್ತಿದೆ. ಆದರೆ, ವಾಣಿಜ್ಯ ಬಳಕೆಯ ಎಲ್ಪಿಜಿ ಪೂರೈಕೆಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಮಾನದಂಡ ಹೊರಡಿಸುವವರೆಗೂ ಪೂರೈಕೆ ಸ್ಥಗಿತಗೊಂಡಿದೆ. ಈ ಸಮಸ್ಯೆ ಬಹಳ ದಿನ ಮುಂದುವರಿಯದಂತೆ ಸರಕಾರದ ಮಟ್ಟದಲ್ಲಿ ಕ್ರಮ ಆಗುತ್ತಿದೆ. ಸದ್ಯ ಗೃಹ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ಗಳು, ವಸತಿಯುತ ಶಾಲೆಗಳು, ಮಿಲಿಟರಿ ಕ್ಯಾಂಟೀನ್ಗಳು, ಸಿಎಎಸ್ಫ್, ಜೈಲು ಸೇರಿದಂತೆ ಸಾರ್ವಜನಿಕ ವಲಯದ ತುರ್ತು ಸೇವಾ ಸಂಸ್ಥೆಗಳಿಗೆ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ದೇವಸ್ಥಾನದ ಅನ್ನ ದಾಸೋಹ ಸೇರಿದಂತೆ, ಚರ್ಚ್, ಮಸೀದಿಗಳಲ್ಲಿಯೂ ಎಲ್ಪಿಜಿ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲು ಜಿಲ್ಲಾಡಳಿತದ ವತಿಯಿಂದ ಮನವಿ ಮಾಡಲಾಗಿದೆ. ರೈಲ್ವೇ ಸ್ಟೇಷನ್ನಿಂದಲೂ ಎಲ್ಪಿಜಿಗಾಗಿ ಬೇಡಿಕೆ ಬಂದಿದ್ದು, ಈ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.





