Connect with us

ಇತರ

ತವರು ಮನೆಗೆ ಹೋಗಲು ಯಾರ ಅನುಮತಿಯೂ ಬೇಡ! ಮದುವೆ ಹೆಂಡತಿಯನ್ನ ನಿಯಂತ್ರಿಸುವ ಆಕೆಯ ಮೇಲೆ ದರ್ಪ ಮೆರೆಯುವ ಲೈಸೆನ್ಸ್ ಅಲ್ಲ : ಹೈಕೋರ್ಟ್

Published

on

ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳು ಒಪ್ಪಿಗೆಯಿಂದ ಶುರುವಾಗು ಪವಿತ್ರವಾದ ಸಂಬಂಧವೇ ಹೊರತು, ಹೆಂಡತಿಯನ್ನು ನಿಯಂತ್ರಿಸುವ ಅಥವಾ ಆಕೆಯ ಮೇಲೆ ದರ್ಪ ಮೆರೆಯುವ ಲೈಸೆನ್ಸ್ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನ ನೀಡಿದೆ.

ಪತ್ನಿಗೆ ಮಾಸಿಕ 9,000 ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಪತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನ ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಹೈಕೋರ್ಟ್ ಪೀಠವು ಈ ಮಾತನ್ನ ಹೇಳಿದೆ. ಮದುವೆಯ ಹೆಸರಿನಲ್ಲಿ ಮಹಿಳೆಯ ವೈಯಕ್ತಿಕ ಆಯ್ಕೆ, ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನ ಕಸಿಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತವರು ಮನೆಗೆ ಹೋಗಲು ಪತಿಯ ಅನುಮತಿ ಬೇಕಿಲ್ಲ
ನಮ್ಮ ಸಮಾಜದಲ್ಲಿ ಈಗ ಹೇಗಿದೆ ಅಂದರೆ ಪತ್ನಿ ತನ್ನ ತವರು ಮನೆಗೆ ಹೋಗಲು ಗಂಡ ಅಥವಾ ಅತ್ತೆ ಮಾವನ ಬಳಿ ಪರ್ಮಿಷನ್‌ ಕೇಳಬೇಕು. ಜನರಲ್ಲಿರುವ ಇಂತಹ ಮನಸ್ಥಿತಿ ಬಗ್ಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ತನ್ನ ಹೆತ್ತವರನ್ನ ನೋಡಲು ತವರು ಮನೆಗೆ ಹೋಗಬೇಕೆಂಬುದು ಒಬ್ಬ ಮಹಿಳೆಯ ಆಯ್ಕೆ. ಇದಕ್ಕಾಗಿ ಆಕೆಗೆ ಮದುವೆ ಯಾಗಿದೆ ಎನ್ನುವ ಒಂದೇ ಕಾರಣಕ್ಕೆ ಗಂಡನ ಮನೆಯಲ್ಲಿರುವ ಪ್ರತಿಯೊಬ್ಬರ ಅನುಮತಿಯನ್ನ ಏಕೆ ಪಡೆಯಬೇಕು ಎಂಬುದು ಈ ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ,” ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಗೆಲಸ ಕೇವಲ ಮಹಿಳೆಯ ಜವಾಬ್ದಾರಿಯಲ್ಲ
ಇನ್ನೂ ಈ ಮನೆಗೆಲಸ ಹಾಗೂ ಅತ್ತೆ-ಮಾವನ ಆರೈಕೆ ಕೇವಲ ಹೆಣ್ಣು ಮಕ್ಕಳ ಜವಾಬ್ದಾರಿ ಎಂಬ ಪುರುಷ ಪ್ರಧಾನ ಮನಸ್ಥಿತಿಗೂ ನ್ಯಾಯಾಲಯ ಚಾಟಿ ಬೀಸಿದೆ. “ಗಂಡನೂ ಸೇರಿದಂತೆ ಯಾರೊಬ್ಬರೂ ಮಹಿಳೆಗೆ ಮನೆಗೆಲಸ ಮಾಡಲು ಅಥವಾ ಗಂಡನ ಪೋಷಕರನ್ನ ನೋಡಿಕೊಳ್ಳಲು ಒತ್ತಾಯಿಸುವಂತಿಲ್ಲ. ಮನೆಯ ದೈನಂದಿನ ಕೆಲಸಗಳನ್ನ ಗಂಡ ಮತ್ತು ಹೆಂಡತಿ ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು” ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕುಟುಂಬದ ಮೇಲಿನ ಪತ್ನಿಯ ಸಮರ್ಪಣಾ ಭಾವವನ್ನ ಆಕೆಯ ವಿಧೇಯತೆ ಅಥವಾ ಗುಲಾಮಗಿರಿಯೆಂದು ಅಳೆಯಲು ಸಾಧ್ಯವೇಯಿಲ್ಲ. ತನ್ನ ವೃತ್ತಿಜೀವನ, ಆರ್ಥಿಕ ವಿಚಾರಗಳು ಮತ್ತು ಜೀವನದ ಇತರ ಆಯಾಮಗಳ ಬಗ್ಗೆ ಸ್ವತಂತ್ರವಾಗಿ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗೆ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಯಸ್ಸಾದ ತಂದೆ ತಾಯಿಗಳ ಆರೈಕೆ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯಾಲಯ, ಪೋಷಕರನ್ನ ನೋಡಿಕೊಳ್ಳುವ ಜವಾಬ್ದಾರಿ ಅವರ ಸ್ವಂತ ಮಗ ಅಥವಾ ಮಗಳ ಮೇಲಿರುತ್ತದೆಯೇ ಹೊರತು, ಅಳಿಯ ಅಥವಾ ಸೊಸೆಯ ಮೇಲಲ್ಲ ಎಂದಿದೆ. ಸೊಸೆ ಅಥವಾ ಅಳಿಯ ಮಾಡುವ ಪೋಷಕರ ಆರೈಕೆಯು ಸ್ವಯಂಪ್ರೇರಿತವಾಗಿರಬೇಕು, ಹೊರತು ಅದು ಬಲವಂತದ ಹೇರಿಕೆಯಾಗಬಾರದು ಎಂದು ಕೋರ್ಟ್ ತಿಳಿಸಿದೆ.

ಜೀವನಾಂಶ ಕಡಿತಕ್ಕೆ ಕೋರ್ಟ್ ನಕಾರ
ವಿಚಾರಣೆ ವೇಳೆ ಪತಿಯು, “ನಾನು ಕೂಲಿ ಕಾರ್ಮಿಕನಾಗಿದ್ದು, ವಯಸ್ಸಾದ ಪೋಷಕರನ್ನ ನೋಡಿಕೊಳ್ಳಬೇಕಿದೆ. ಪತ್ನಿ ತನ್ನಿಷ್ಟದಂತೆ ಮನೆ ಬಿಟ್ಟು ಹೋಗಿದ್ದಾಳೆ. ಹಾಗಾಗಿ ಜೀವನಾಂಶವನ್ನ ಕಡಿತಗೊಳಿಸಬೇಕು” ಎಂದು ಮನವಿ ಮಾಡಿದ್ದನು. ಆದರೆ ಈ ವಾದವನ್ನ ತಳ್ಳಿಹಾಕಿದ ಕೋರ್ಟ್, ಪ್ರಸ್ತುತ ದಿನಮಾನದ ಬೆಲೆ ಏರಿಕೆ ಹಾಗೂ ಜೀವನ ವೆಚ್ಚವನ್ನ ಗಮನಿಸಿದರೆ, ಒಬ್ಬ ವ್ಯಕ್ತಿಗೆ ದಿನಕ್ಕೆ 150 ರೂಪಾಯಿಯಿಂದ ಜೀವನ ನಡೆಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ತಿಂಗಳಿಗೆ ಪತ್ನಿಗೆ 5,000 ರೂಪಾಯಿ ಹಾಗೂ ಅಪ್ರಾಪ್ತ ಮಗಳಿಗೆ 4,000 ರೂಪಾಯಿ ಸೇರಿ ಒಟ್ಟು 9,000 ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನ ಹೈಕೋರ್ಟ್ ಎತ್ತಿಹಿಡಿದಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement