Published
2 hours agoon
By
Akkare News

ಮೂಡುಬಿದಿರೆಯ ಕಡಲಕೆರೆ ಸೃಷ್ಟಿ ಗಾರ್ಡನ್ನಲ್ಲಿ ಮಂಗಳವಾರ (ಸೆಪ್ಟೆಂಬರ್ 8ರಂದು) ನಡೆದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಜಂಟಿ ಮಹತ್ವದ ಸಮಾಲೋಚನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
ಅಧಿಕೃತ ಪತ್ರ ಬಂದ ಬಳಿಕ ಪ್ರತ್ಯೇಕ ಸಭೆ: ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಕೇವಲ ಅನಧಿಕೃತ ಚರ್ಚೆಗಳಷ್ಟೇ ನಡೆದಿವೆ. ಅಧಿಕೃತ ಆಹ್ವಾನ ಪತ್ರ ಬಂದ ಕೂಡಲೇ ಕಂಬಳ ಸಮಿತಿಯ ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು. ಅಲ್ಲಿ ಕರಾವಳಿಯಿಂದ ಎಷ್ಟು ಜೋಡಿ ಕೋಣಗಳನ್ನು ಕಳುಹಿಸಬೇಕು, ಯಾವ ರೀತಿ ಸಾರಿಗೆ ಹಾಗೂ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಕಂಬಳದಲ್ಲಿ ಕಟ್ಟುನಿಟ್ಟಿನ ಸಮಯಪಾಲನೆಗೆ ಕ್ರಾಂತಿಕಾರಿ ನಿರ್ಧಾರ: ಕಂಬಳ ಕೂಟಗಳು ಅತಿಯಾಗಿ ವಿಳಂಬವಾಗುವುದನ್ನು ತಡೆಗಟ್ಟಲು ಸಭೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
4 ವಿಭಾಗಗಳಿಗೆ ಪ್ರತ್ಯೇಕ ಓಟಗಾರರು/ಹಗ್ಗ ಹಿಡಿಯುವವರು: ಕಂಬಳದ ಪ್ರಮುಖ 4 ವಿಭಾಗಗಳಾದ ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ ಮತ್ತು ನೇಗಿಲು ಕಿರಿಯ ವಿಭಾಗಗಳಿಗೆ, ಆಯಾ ವಿಭಾಗದಲ್ಲಿ ಒಬ್ಬನೇ ಜಾಕಿ (ಓಟಗಾರ) ಅಥವಾ ಒಬ್ಬನೇ ಕೋಣ ಬಿಡುವ ವ್ಯಕ್ತಿ (ಗಿಡಾಪುನಾರ್) ಭಾಗವಹಿಸುವಂತಿಲ್ಲ. ಒಬ್ಬ ವ್ಯಕ್ತಿ ಒಂದು ವಿಭಾಗದಲ್ಲಿ ಒಂದು ಕೋಣ ಓಡಿಸಲು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಹಿಂದೆ ಒಬ್ಬನೇ ಓಟಗಾರ ಅಥವಾ ಹಗ್ಗ ಹಿಡಿಯುವವನು ಬೇರೆ ಬೇರೆ ಕೋಣಗಳಿಗೆ ಕರೆಯಲ್ಲಿ ನಿಲ್ಲುತ್ತಿದ್ದ ಕಾರಣ, ಇತರರು ಆತನಿಗಾಗಿ ಕಾಯಬೇಕಾಗಿ ಗಂಟೆಗಟ್ಟಲೆ ವಿಳಂಬವಾಗುತ್ತಿತ್ತು. ಈಗ 4 ಪ್ರಮುಖ ವಿಭಾಗಗಳಿಗೆ ಪ್ರತ್ಯೇಕ ವ್ಯಕ್ತಿಗಳೇ ಇರಬೇಕಾಗಿರುವುದರಿಂದ ಕಂಬಳಗಳು ನಿಗದಿತ ಸಮಯಕ್ಕೆ ಸರಾಗವಾಗಿ ಮುಕ್ತಾಯಗೊಳ್ಳಲಿವೆ. ಉಳಿದ ಎರಡು ವಿಭಾಗಗಳಾದ ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗಗಳ ಸ್ಪರ್ಧೆಗಳನ್ನು ಮಧ್ಯಾಹ್ನ 3 ಗಂಟೆಯ ಒಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ನಿರ್ಧಾರ ಮಾಡಲಾಗಿದೆ.
₹5 ಕೋಟಿ ಅನುದಾನ ಘೋಷಣೆ ಸಾಧ್ಯತೆ: ಕರಾವಳಿ ಕಂಬಳಕ್ಕೆ ಸರ್ಕಾರದಿಂದ ಶಾಶ್ವತ ಆರ್ಥಿಕ ಬಲ ತುಂಬುವ ವಿಚಾರ ಪ್ರಸ್ತಾಪಿಸಿದ ಅಧ್ಯಕ್ಷರು, ಸೆಪ್ಟೆಂಬರ್ನಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸರ್ಕಾರವು ಬಜೆಟ್ನಲ್ಲಿ ಕಂಬಳಕ್ಕೆ ವಾರ್ಷಿಕ 5 ಕೋಟಿ ರೂ. ವಿಶೇಷ ಅನುದಾನವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ. ಈ ಸಂಬಂಧ ಕಂಬಳ ಸಮಿತಿಯು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಸೆ.16ರಿಂದ ಕಾರ್ಕಳದಲ್ಲಿ ಈಜು ತರಬೇತಿ: ಮಿಯಾರಿನಲ್ಲಿ ಇತ್ತೀಚೆಗೆ ನಡೆದ ಓಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಸುಮಾರು 180 ಮಂದಿ ಯುವ ಓಟಗಾರರಿಗೆ ಸೆಪ್ಟೆಂಬರ್ 12 ಮತ್ತು 13ರಂದು ಕಾರ್ಕಳದ ಕ್ರೀಡಾ ಇಲಾಖೆಯ ನೂತನ ಸ್ವಿಮ್ಮಿಂಗ್ ಪೂಲ್ನಲ್ಲಿ ವಿಶೇಷ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿದರು. ಸಭೆಯಲ್ಲಿ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಸಮಿತಿಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು. 

