Connect with us

ಇತರ

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

Published

on

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ (CEO) ಪತ್ರ ಬರೆದಿರುವ ಅವರು, ಎಸ್‌ಐಆರ್ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮೂಡಿರುವ ಅನುಮಾನಗಳಿಗೆ ಚುನಾವಣಾ ಆಯೋಗವು ತಕ್ಷಣವೇ ಲಿಖಿತವಾಗಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.“2025ರ ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ ಒಟ್ಟು 5,54,22,344 ಮತದಾರರಿದ್ದರು. ಆದರೆ 2026ರ ಜೂನ್ 30ರಿಂದ ಆರಂಭವಾದ ಎಸ್‌ಐಆರ್ ಪ್ರಕ್ರಿಯೆಯ ನಡುವೆ ಎಷ್ಟು ಹೊಸ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವಿಕೆ ನಡೆದಿದೆ ಎಂಬ ಸಂಪೂರ್ಣ ಲೆಕ್ಕವನ್ನು ಆಯೋಗ ಪ್ರಕಟಿಸಿಲ್ಲ. ಎರಡು ಅವಧಿಯ ಒಟ್ಟು ಸಂಖ್ಯೆಯಲ್ಲಿ ವ್ಯತ್ಯಾಸವಿಲ್ಲದಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ASDDO ವರ್ಗೀಕರಣ ಮತ್ತು ಮತಗಟ್ಟೆ ಮ್ಯಾಪಿಂಗ್ ಗೊಂದಲ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ (Absent, Shifted, Dead, Duplicate and Others) ಹೆಸರಿನಲ್ಲಿ ಮತದಾರರನ್ನು ವರ್ಗೀಕರಿಸಿರುವುದೇ ದೊಡ್ಡ ಸಮಸ್ಯೆಯಾಗಿದೆ. 2025ರ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆಗೂ, 2026ರ ಎಸ್‌ಐಆರ್‌ನಲ್ಲಿ ಎಎಸ್‌ಡಿಡಿಒ ಎಂದು ಗುರುತಿಸಲಾದ ಸಂಖ್ಯೆಗೂ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ವ್ಯತ್ಯಾಸವಿದೆ. ಕೇವಲ ‘ವಿವರಿಸಲಾಗದ ಮತದಾರರು’ ಎಂದು ಹೇಳಿ ಆಯೋಗ ನುಣುಚಿಕೊಳ್ಳಬಾರದು, ಪ್ರತಿಯೊಂದು ಕ್ಷೇತ್ರದ ಮಟ್ಟದಲ್ಲೂ ಅಂಕಿಅಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಯಾವುದೇ ಮುನ್ಸೂಚನೆ ಅಥವಾ ಸ್ಪಷ್ಟ ಕಾರಣ ನೀಡದೆ ಭಾರಿ ಸಂಖ್ಯೆಯ ಮತದಾರರನ್ನು ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಹಳೆಯ ಮತ್ತು ಹೊಸ ಪಟ್ಟಿಗಳನ್ನು ‘Form-20’ ಆಧಾರದಲ್ಲಿ ಹೋಲಿಸಿ ವಿಶ್ಲೇಷಣೆ ಮಾಡುವುದು ಕಷ್ಟಕರವಾಗಿದೆ. ಇಂತಹ ಬೃಹತ್ ಮಟ್ಟದ ಮತಗಟ್ಟೆ ಬದಲಾವಣೆಯ ಅಗತ್ಯ ಏನಿತ್ತು ಎಂಬುದನ್ನು ವಿವರಿಸುವ ಜೊತೆಗೆ, ‘ಹಳೆಯ ಮತ್ತು ಹೊಸ ಮತಗಟ್ಟೆಗಳ ಸಂಪೂರ್ಣ ಮ್ಯಾಪಿಂಗ್’ ವರದಿಯನ್ನು ತಕ್ಷಣ ಪ್ರಕಟಿಸಬೇಕು ಎಂದು ಕೆಪಿಸಿಸಿ ನಾಯಕರು ಒತ್ತಾಯಿಸಿದ್ದಾರೆ. ಮಹದೇವಪುರ ಅಕ್ರಮ ಮತ್ತು ಗಾಯಬ್ ಆದ PDFಗಳು: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಕರಡು ಪಟ್ಟಿಯಲ್ಲಿ ನೂರಾರು ಮತದಾರರ ಮನೆ ಸಂಖ್ಯೆಯನ್ನು ‘0’ (Zero) ಎಂದು ತೋರಿಸಲಾಗಿದೆ. ಈ ಬಗ್ಗೆ ಈಗಾಗಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರೂ ಲೋಪಗಳು ಮುಂದುವರಿದಿವೆ. ಇದರ ಜೊತೆಗೆ, ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಲ ಕ್ಷೇತ್ರಗಳ 2025ರ ಮತದಾರರ ಪಟ್ಟಿಯ ಪಿಡಿಎಫ್‌ಗಳೇ ಲಭ್ಯವಿಲ್ಲದಂತೆ ಮಾಡಲಾಗಿದೆ. ಇದು ಹಳೆಯ ಮತ್ತು ಹೊಸ ಪಟ್ಟಿಯ ಮುಕ್ತ ಹೋಲಿಕೆಗೆ ಅಡ್ಡಿಯುಂಟುಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement