Published
7 hours agoon
By
Akkare News

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿಪೂಜಾರಿ ಚಿಲಿಂಬಿ ಅವರು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸತ್ಯಧರ್ಮದ ಕಾರ್ಣಿಕ ಶಕ್ತಿಗಳ ಅನುಗ್ರಹದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ದೇಶ-ವಿದೇಶಗಳ ಬಿಲ್ಲವ ಸಂಘಟನೆಗಳಿಂದ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಿತ್ಯ ಅನ್ನದಾನದ ವ್ಯವಸ್ಥೆಗಾಗಿ ಅನ್ನಛತ್ರ ನಿರ್ಮಾಣ, ಬಿಲ್ಲವ ಸಮಾಜದ ವೈದ್ಯಕೀಯ ಪರಂಪರೆಯನ್ನು ಬಿಂಬಿಸುವ ಆಯುರ್ವೇದ ಕೇಂದ್ರ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಕಾಮಗಾರಿಗಳು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪ್ರಗತಿಯಲ್ಲಿವೆ. ಈ ಎಲ್ಲಾ ಕಾರ್ಯಗಳು ಕ್ಷೇತ್ರದ ಮಹಿಮೆ ಹಾಗೂ ಸಮಾಜದ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ ಎಂದು ಅವರು ಹೇಳಿದರು.
ಮಹಾಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ಲೆಕ್ಕಪತ್ರಗಳನ್ನು ಮಂಡಿಸಿದರು. ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅವರು ಆಯುರ್ವೇದ ಕೇಂದ್ರ ಮತ್ತು ಯಾತ್ರಿ ನಿವಾಸದ ಕಾಮಗಾರಿಗಳ ಪ್ರಗತಿ ವರದಿ ಹಾಗೂ ಲೆಕ್ಕಪತ್ರಗಳನ್ನು ವಿವರಿಸಿದರು. ಗೆಜ್ಜೆಗಿರಿ ಮೇಳದ ಪ್ರಗತಿಯ ಕುರಿತು ಸಂಚಾಲಕ ನಿತ್ಯಾನಂದ ನಾವರ ಮಾಹಿತಿ ನೀಡಿದರು. ನವರಾತ್ರಿ ಉತ್ಸವದ ಸಂಚಾಲಕ ಹರೀಶ್ ಕೆ. ಪೂಜಾರಿ ಅವರು ಉತ್ಸವಕ್ಕೆ ಭಕ್ತಾದಿಗಳಿಂದ ದೊರೆತ ಸಹಕಾರವನ್ನು ಸ್ಮರಿಸಿದರು. 




