Published
2 years agoon
By
Akkare News
ಮಡಿಕೇರಿ: ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ಮದುವೆಯ ಹಿಂದಿನ ದಿನ ಸಿಹಿತಿಂಡಿ ನೀಡಿಲ್ಲವೆಂದು ಮದುವೆಯನ್ನೇ ರದ್ದುಗೊಳಿಸಿದ ಘಟನೆ ನಡೆದಿದೆ.
ಸಮೀಪದ ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕ ನೋರ್ವನೊಂದಿಗೆ ನಿಶ್ಚಯವಾಗಿದ್ದು. ಮೇ 5ರಂದು ಇಲ್ಲಿನ ಜಾನಕಿ ಕನ್ವೆನ್ಸನ್ ಹಾಲ್ನಲ್ಲಿ ವಿವಾಹ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದು, ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು.ಬಾನುವಾರ ಬೆಳಗ್ಗೆ ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು.







ಶನಿವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ ಬಾನುವಾರ ಬೆಳಗ್ಗೆ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದ. ಆದರೆ ದಿಢೀರ್ ಘಟನಾವಳಿಯಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು.ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.