Published
4 months agoon
By
Akkare News
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಸೇರಿದಂತೆ ರಾಜ್ಯಪಾಲರ ಮುಂದೆ ಬಾಕಿ ಇರುವ ಹಲವರ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಆಗಸ್ಟ್ 31ರಂದು ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು (ಆ.27) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,”ಆಗಸ್ಟ್ 31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿ, ಎಲ್ಲಾ ಸಚಿವರು, ಕಾಂಗ್ರೆಸ್‌ನ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿರಲಿದ್ದಾರೆ” ಎಂದು ಹೇಳಿದರು.
“ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ರಾಜ್ಯಪಾಲರು ನೀಡಿಲ್ಲ. ಆದರೆ, ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಹೀಗಾಗಿ, ಕಳೆದ ವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ಕೆಲವು ಸಲಹೆಗಳನ್ನು ಕಳುಹಿಸಿದ್ದೆವು. ಮಖ್ಯಮಂತ್ರಿಗಳ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ನ್ಯಾಯಾಲಯ ಕಾನೂನಿನ ಪ್ರಕಾರ ಯಾವ ತೀರ್ಮಾನ ಮಾಡಬೇಕೋ ಮಾಡಲಿದೆ” ಎಂದರು.
ಹೆಚ್ಡಿಕೆ ವಿರುದ್ದ ಕಿಡಿ
“ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಸಾಚಾ ಕೆಲಸ ಮಾಡುವವರು. ಅವರ ವಿರುದ್ಧ 10 ವರ್ಷಗಳ ಹಿಂದೆಯೇ ಕೇಸು ದಾಖಲಾಗಿದೆ. 2023ರ ನವೆಂಬರ್ 21ರಂದು ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ನಾವೇನೂ ತಿರುಚಿ ಪರಚಿ ಮಾತಾಡುತ್ತಿಲ್ಲ. 218 ಪುಟಗಳ ತನಿಖಾ ವರದಿಯನ್ನು ರಾಜ್ಯಪಾಲರಿಗೆ ಎಸ್‌ಐಟಿ ನೀಡಿದೆ. ಬಹಳ ಸತ್ಯಕ್ಕೆ ಹೆಸರಾದವರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಾನು ಸಹಿಯೇ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯ ಆಯ್ತು” ಎಂದು ಡಿಕೆಶಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.
“ಅವರ ಸಹಿ ಅಲ್ಲ ಅಂದಮೇಲೆ ಯಾರೋ ಫೋರ್ಜರಿ ಮಾಡಿದ್ದಾರೆ. ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಯಾಕೆ ದೂರು ಕೊಟ್ಟಿಲ್ಲ?. ಸಹಿ ಫೋರ್ಜರಿ ಆಗಿದ್ದಿದ್ದರೆ ಒಬ್ಬ ಪಿಸಿಗಾದರೂ ದೂರು ಕೊಡಬೇಕಲ್ವಾ? ಎಂದು ಪ್ರಶ್ನಿಸಿದರು.
“ನಾನು ಅವರ ಕುಟುಂಬದ ಆಸ್ತಿ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದೆ. ಈವರೆಗೂ ಅವರು ಅದಕ್ಕೆ ಉತ್ತರ ನೀಡಿಲ್ಲ. ನನ್ನ ಕುಟುಂಬದ ಸುದ್ದಿಗೆ ಬರುತ್ತೀಯಾ? ಎಂದೆಲ್ಲಾ ಅವರು ಕಿಡಿಕಾರಿದ್ದಾರೆ. ಅವರು ಕೂಡ ಯಾರ ಕುಟುಂಬದ ವಿಚಾರಕ್ಕೆ ಹೋಗಿದ್ದಾರೆ ಎಂಬುವುದನ್ನು ಹೇಳಬೇಕು. ಅವರು ಹೇಗೆ ಬೇರೆಯವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೋ, ಅದೇ ರೀತಿ ಬೇರೆಯವರು ಅವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ರಾಮಚಂದ್ರಪ್ಪ ಉಪಸ್ಥಿತರಿದ್ದರು.