Published
4 months agoon
By
Akkare Newsಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹಳೆಯ ವಾಹನ ಗುಜರಿಗೆ ಹಾಕಿ, ಹೊಸ ವಾಹನವನ್ನು ಖರೀದಿಸುವ ಗ್ರಾಹಕರಿಗೆ ಶೇಕಡ 1.5 ರಿಂದ 3% ರಿಯಾಯಿತಿ ನೀಡಲು ಪ್ರಮುಖ ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ತಯಾರಕ ಕಂಪನಿಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ. ಈ ರಿಯಾಯಿತಿ ಪ್ರಯೋಜನದಿಂದ ಮುಂಬರಲಿರುವ ಹಬ್ಬದ ಋತುವಿನಲ್ಲಿ ವಾಹನ ಮಾರಾಟ ಪ್ರಮಾಣ ಹೆಚ್ಚಳವಾಗಲಿದೆ. ಜೊತೆಗೆ ಕೇಂದ್ರ ಸರ್ಕಾರದ ಗುಜರಿ ನೀತಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಮಂಗಳವಾರ, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಸಚಿವರು ವಿಸ್ತೃತ ಸಭೆ ನಡೆಸಿದ್ದರು. ಈ ವೇಳೆ, ಹಲವು ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ತಯಾರಕ ಕಂಪನಿಗಳು ಗುಜರಿಗೆ ಹಾಕಿರುವ ದಾಖಲೆ ಪತ್ರ ತೋರಿಸಿದವರಿಗೆ ಸೀಮಿತ ಅವಧಿಗೆ ರಿಯಾಯಿತಿ ನೀಡಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.
ವಾಣಿಜ್ಯ ವಾಹನ ತಯಾರಕರು 2 ವರ್ಷ ಹಾಗೂ ಪ್ರಯಾಣಿಕ ವಾಹನ ತಯಾರಕರು 1 ವರ್ಷದ ಸೀಮಿತ ಅವಧಿಗೆ ರಿಯಾಯಿತಿ ಕೊಡಲು ತಯಾರಿವೆ ಎಂದು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಈಗಾಗಲೇ ಮರ್ಸಿಡಿಸ್ ಬೆಂಜ್ ರೂ.25,000 ರೂಪಾಯಿ ರಿಯಾಯಿತಿ ನೀಡಲು ಒಪ್ಪಿದೆ ಎಂದು ವರದಿಯಾಗಿದೆ.
ಶೀಘ್ರದಲ್ಲೇ ಗುಜರಿಗೆ ಹಾಕಿರುವ ದಾಖಲೆ ಪತ್ರ ತೋರಿಸಿದವರಿಗೆ, ಪ್ರಯಾಣಿಕ ವಾಹನ ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ ಹ್ಯುಂಡೈ, ಕಿಯಾ, ಟೊಯೊಟಾ ಹಾಗೂ ಹೋಂಡಾಗಳು ಹೊಸ ಕಾರಿನ ಎಕ್ಸ್ ಶೋರೂಂ ಮೇಲೆ 1.5% ರಿಯಾಯಿತಿ ನೀಡಲಿವೆ ಎಂದು ತಿಳಿದುಬಂದಿದೆ. ಉದಾಹರಣೆಗೆ ನೂತನ ಕಾರು 6 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದರೆ, ರೂ.9,000 ರಿಯಾಯಿತಿ ಲಭ್ಯವಾಗಲಿದೆ.
ಅದೇ ರೀತಿಯಲ್ಲಿ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ವೋಲ್ವೋ ಐಷರ್ ಕಮರ್ಷಿಯಲ್ ವೆಹಿಕಲ್ಸ್, ಅಶೋಕ್ ಲೇಲ್ಯಾಂಡ್, ಫೋರ್ಸ್ ಮೋಟಾರ್ಸ್ ಮತ್ತು ಮಹೀಂದ್ರಾಗಳು, ಕಾರ್ಗೋ (ಸರಕು ಸಾಗಾಣಿಕೆ) ವಾಹನಗಳ ಎಕ್ಸ್ ಶೋರೂಂ ಮೇಲೆ 3% ರಿಯಾಯಿತಿ ಕೊಡಲು ಅಣಿಯಾಗುತ್ತಿವೆ ಎಂದು ಗೊತ್ತಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
2022ರಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ತೆಗೆದುಕೊಳ್ಳುವವರಿಗೆ ಶೇಕಡ 5% ರಿಯಾಯಿತಿ ನೀಡುವಂತೆ ಆಟೋಮೊಬೈಲ್ ಒಕ್ಕೂಟಗಳಿಗೆ ಸಲಹೆ ನೀಡಿತ್ತು. ಆದಾಗ್ಯೂ, ನಾನಾ ಕಾರಣಗಳಿಗೆ ಯಾವುದೇ ವಾಹನ ತಯಾರಕ ಕಂಪನಿಗಳು ಸಹ ಈ ಮಟ್ಟದಲ್ಲಿ ರಿಯಾಯಿತಿ ನೀಡಲು ಆಸಕ್ತಿ ತೋರಿಸಿರಲಿಲ್ಲ.