Published
3 weeks agoon
By
Akkare Newsಪುತ್ತೂರು; ಪುತ್ತೂರು ಎಪಿಎಂಸಿಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನೆ ಜಾನಕಿ ಅವರಿಗೆ ವಿಟ್ಲದಲ್ಲಿ ಉಚಿತವಾಗಿ ಮನೆ ನಿವೇಶನ ನೀಡುವುದಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರು ಭರವಸೆ ನೀಡಿದ್ದಾರೆ. ಎಪಿಎಂಸಿ ವಸತಿಗೃಹದ ಕೊಠಡಿಯೊಂದರಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿದ್ದ ಅವರು ಎಪಿಎಂಸಿ ಈ ವಸತಿಗೃಹದ ಕೊಠಡಿಗೆ ಬೀಗ ಜಡಿಯುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಎಪಿಎಂಸಿ ಕಾರ್ಯದರ್ಶಿ ಎಂ.ಸಿ ಪಡಗಾನೂರು ಅವರು ಅನಧಿಕೃತ ವಾಸ್ತವ್ಯ ತೆರವು ಮಾಡುವಂತೆ ನೋಟೀಸು ನೀಡಿದ್ದರು. ಮಾನವೀಯ ನೆಲೆಯಲ್ಲಿ ಆಕೆಗೆ ೪ ತಿಂಗಳ ಕಾಲ ಅವಕಾಶವನ್ನೂ ನೀಡಲಾಗಿತ್ತು. ಇನ್ನೊಬ್ಬ ಮಹಿಳೆಯ ಹೆಸರಲ್ಲಿ ಈ ಕೊಠಡಿಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಈ ನೋಟಿಸಿಗೆ ಅಧಿಕೃತ ಬಾಡಿಗೆದಾರೆ ಪ್ರೇಮಾಕುಮಾರಿ ಅವರು ಲಿಖಿತವಾಗಿ ಉತ್ತರಿಸಿ ಕೊಠಡಿಗೆ ತೆರವಿಗೆ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಮತ್ತಷ್ಟು ಅವಕಾಶ ನೀಡಿದರೂ ಅನಧಿಕೃತ ವಾಸ್ತವ್ಯಕ್ಕೆ ದಿನಗೂಲಿ ನೌಕರೆ ಜಾನಕಿ ಅವರು ಅಂತ್ಯ ಹಾಡದ ಕಾರಣ ಕೊಠಡಿಗೆ ಬೀಗ ಜಡಯುವ ಅನಿವಾರ್ಯಕ್ರಮಕ್ಕೆ ಎಪಿಎಂಸಿ ಅಧಿಕಾರಿಗಳು ಮುಂದಾಗಿದ್ದರು.
ಕೊಠಡಿಗೆ ಬೀಗ ಹಾಕುವ ಮೊದಲು ಸುಮಾರು ೧ ಗಂಟೆಗಳ ಕಾಲ ಜಾನಕಿ ಅವರಿಗೆ ವಿನಂತಿ ಮಾಡಿದರೂ ಸ್ಥಳಕ್ಕೆ ಅವರು ಬರಲಿಲ್ಲ. ಬೀಗ ಜಡಿದ ಬಳಿಕ ಸಂಜೆ ಎಪಿಎಂಸಿ ಕಚೇರಿಯಲ್ಲಿ ಕೆಲಸ ಮುಗಿಸಿ ಬಂದ ಜಾನಕಿ ಅವರು ವಸತಿಗೃಹದ ಮುಂದೆ ಕುಳಿತಿದ್ದರು. ಮಳೆ ಬರುತ್ತಿದ್ದರೂ ಲೆಕ್ಕಿಸದೆ ಕೊಡೆ ಹಿಡಿದುಕೊಂಡು ತಡರಾತ್ರಿ ತನಕವೂ ಇದೇ ಜಾಗದಲ್ಲಿ ಪ್ರತಿಭಟನಾ ರೂಪದಲ್ಲಿ ಕುಳಿತಿದ್ದರು. ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ನಿಶ್ಯಕ್ತಿಯಾಗುತ್ತಿದೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದರು.
ಈಕೆಯನ್ನು ದೂರವಾಣಿಯಲ್ಲಿ ಮಾತನಾಡಿಸಿದ ಶಾಸಕ ಅಶೋಕ್ ರೈ ಅವರು ಕಾನೂನು ಪ್ರಕಾರ ನಿಮಗೆ ಎಪಿಎಂಸಿ ವಸತಿಗೃಹದಲ್ಲಿ ಇರಲು ಅವಕಾಶ ಇಲ್ಲ. ನಮಗೆ ಉಚಿತವಾಗಿ ಮನೆ ನಿವೇಶನ ನಾನು ನೀಡುತ್ತೇನೆ. ನೀವು ಮನೆ ಕಟ್ಟಿಕೊಳ್ಳಬೇಕು ಎಂದು ಸೂಚಿಸಿದರು. ಇದಕ್ಕೆ ಸಮ್ಮತಿಸಿದ ಜಾನಕಿ ಅವರು ಮನೆ ನಿವೇಶನ ನೀಡಿದರೆ ತಾನೇ ಮನೆ ಕಟ್ಟಿಕೊಳ್ಳುವುದಾಗಿ ಶಾಸಕರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.