Published
2 months agoon
By
Akkare Newsಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಶನಿವಾರದಂದು 81 ವಿಧಾನಸಭಾ ಸ್ಥಾನಗಳಲ್ಲಿ 70 ಸ್ಥಾನಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆ ಇಂಡಿಯಾ ಒಕ್ಕೂಟದಲ್ಲಿ ಬಿರುಕುಗಳು ಬಹಿರಂಗವಾಗಿದೆ. ಉಳಿದ 11 ಸ್ಥಾನಗಳನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಎಡಪಕ್ಷಗಳ ನಡುವೆ ಹಂಚಲಾಗುವುದು ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಮತ್ತು ರಾಜ್ಯದ ಹಿರಿಯ ಸಚಿವ ರಾಮೇಶ್ವರ್ ಓರಾನ್ ಅವರ ಸಮ್ಮುಖದಲ್ಲಿ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಜೆಎಂಎಂ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ನಡೆದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.
ಆರ್‌ಜೆಡಿ ಮತ್ತು ಎಡಪಕ್ಷಗಳಿಗೆ ಮೀಸಲಾದ 11 ಸ್ಥಾನಗಳು ಅವರು ಪ್ರಬಲವಾಗಿರುವ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಆದಾಗ್ಯೂ, ಇಂಡಿಯಾ ಒಕ್ಕೂಟದ ಪಕ್ಷವಾಗಿರುವ ಆರ್‌ಜೆಡಿ ಈ ಸೀಟು ಹಂಚಿಕೆಯ ಘೋಷಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ರಾಂಚಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ, ಮೈತ್ರಿ ಕುರಿತು ಜೆಎಂಎಂ ಮತ್ತು ಕಾಂಗ್ರೆಸ್ ಏಕಪಕ್ಷೀಯವಾಗಿ ನಿರ್ಧರಿಸಿದ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.
ಆರ್‌ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ರಾಂಚಿಯಲ್ಲಿ ಉಪಸ್ಥಿತರಿದ್ದರೂ, ಮೈತ್ರಿ ಬಗ್ಗೆ ಮಾಡಬೇಕಾದ ಘೋಷಣೆಯ ಬಗ್ಗೆ ಅವರಿಗೆ ತಿಳಿಸಲಾಗಿಲ್ಲ ಎಂದು ಮನೋಜ್ ಝಾ ಹೇಳಿದ್ದಾರೆ. ರಾಜ್ಯದಲ್ಲಿ ಆರ್‌ಜೆಡಿ ಪಕ್ಷವೂ ಏಕಾಂಗಿಯಾಗಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾರ್ಮರ್ಥ್ಯ ಇದೆ ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ಮತ್ತು ಜೆಎಂಎಂ ಏಕಪಕ್ಷೀಯವಾಗಿ 70 ಸ್ಥಾನಗಳಲ್ಲಿ ಮೈತ್ರಿಯನ್ನು ಘೋಷಿಸಿ ನಮಗೆ ಕೇವಲ 5 ಸ್ಥಾನಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ 2019 ರಲ್ಲಿ ನಮ್ಮ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿ ಇದ್ದರು. ನಾವು ಜಾರ್ಖಂಡ್‌ನಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಮರ್ಥರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೀಟು ಹಂಚಿಕೆ ಸೂತ್ರದ ಬಗ್ಗೆ ಒಮ್ಮತಕ್ಕೆ ಬಂದಿದೆ. ಸೂತ್ರದ ಪ್ರಕಾರ, ಎಜೆಎಸ್‌ಯು ಪಕ್ಷ 10 ಸ್ಥಾನಗಳಲ್ಲಿ, ಜೆಡಿ (ಯು) ಎರಡು ಸ್ಥಾನಗಳಲ್ಲಿ ಮತ್ತು ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಬಣ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ. ಉಳಿದ 68 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ.
ರಾಂಚಿಯ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಮತ್ತು ಜಾರ್ಖಂಡ್‌ನ ಸಹ-ಚುನಾವಣೆ ಉಸ್ತುವಾರಿ ಆಗಿರುವ ಹಿಮಂತ ಬಿಸ್ವಾ ಶರ್ಮಾ ಅವರು ಇನ್ನು ಮುಂದೆ ಎನ್‌ಡಿಎಯಾಗಿ ಒಟ್ಟಾಗಿ ಕೆಲಸ ಮಾಡಲಿದ್ದೇವೆಯೇ ಹೊರತು ಬಿಜೆಪಿ ಅಥವಾ ಎಜೆಎಸ್‌ಯುನಂತಹ ವೈಯಕ್ತಿಕ ಪಕ್ಷಗಳಾಗಿ ಅಲ್ಲ ಎಂದು ಹೇಳಿದ್ದಾರೆ.