Published
2 months agoon
By
Akkare Newsಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಆರ್‌ಸಿಪಿ ಸಿಂಗ್ ಅವರು ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಶೀಘ್ರದಲ್ಲೇ ತಮ್ಮದೇ ಆದ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಶನಿವಾರ ಘೋಷಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ವಿವರಣೆಯನ್ನು ಕೇಳಿದ ನಂತರ ಅವರು 2023 ರಲ್ಲಿ ಬಿಜೆಪಿ ಸೇರಿದ್ದರು.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿಂಗ್, “ನಾನು ನನ್ನ ಬಿಜೆಪಿ ಸದಸ್ಯತ್ವವನ್ನು ನವೀಕರಿಸಿಲ್ಲ, ನನ್ನ ಉದ್ದೇಶಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಾನು ಶೀಘ್ರದಲ್ಲೇ ನನ್ನದೇ ಆದ ರಾಜಕೀಯ ಪಕ್ಷವನ್ನು ರಚಿಸುತ್ತೇನೆ” ಎಂದು ಬಹಿರಂಗಪಡಿಸಿದರು.
ಕಳೆದ 18 ತಿಂಗಳಿಂದ ಬಿಜೆಪಿಯಲ್ಲಿ ಯಾವುದೇ ಮಹತ್ವದ ಜವಾಬ್ದಾರಿಯನ್ನು ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ”ನನಗೆ ರಾಜಕೀಯ ಸಂಘಟನೆಯನ್ನು ನಡೆಸಿ ಸುದೀರ್ಘ ಅನುಭವವಿರುವುದರಿಂದ ಅದನ್ನು ಪಕ್ಷದ ಲಾಭಕ್ಕಾಗಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ನಾಯಕತ್ವದೊಂದಿಗೆ ಸಂವಹನ ನಡೆಸಿದ್ದೇನೆ. ಆದರೆ, ಬಿಜೆಪಿ ವಿಭಿನ್ನ ಶೈಲಿಯ ಕಾರ್ಯವನ್ನು ಹೊಂದಿದೆ ಮತ್ತು ನಾನು ಅದನ್ನು ಪ್ರಶಂಸಿಸುತ್ತೇನೆ” ಎಂದು ಅಸಮಾಧಾನ ಹೊರಹಾಕಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಯಿಂದ ನಿರ್ಗಮಿಸುವುದನ್ನು ಮತ್ತು 2022 ರ ಆಗಸ್ಟ್‌ನಲ್ಲಿ ಮಹಾಘಟಬಂಧನ್‌ನೊಂದಿಗೆ ಅವರ ನಂತರದ ಹೊಂದಾಣಿಕೆಯನ್ನು ಎದುರಿಸಲು ಸಿಂಗ್ ಅವರ ಬಿಜೆಪಿ ಪ್ರವೇಶವನ್ನು ಒಂದು ಕಾರ್ಯತಂತ್ರದ ಕ್ರಮವೆಂದು ಪರಿಗಣಿಸಲಾಗಿತ್ತು. 2024 ರ ಜನವರಿಯಲ್ಲಿ ನಿಈಶ್ ಕುಮಾರ್ ಅವರು ಎನ್‌ಡಿಎಗೆ ಮರಳಿದ ನಂತರ, ಸಿಂಗ್ ಅವರು ಪಕ್ಷದೊಳಗೆ ರಾಜಕೀಯವಾಗಿ ಪ್ರತ್ಯೇಕತೆಯನ್ನು ಕಂಡುಕೊಂಡರು.
ತಮ್ಮ ಹಿಂದಿನ ಪಕ್ಷವಾದ ಜನತಾ ದಳ ಯುನೈಟೆಡ್ (ಜೆಡಿಯು) ಗೆ ಮರಳುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಸಿಂಗ್ ಈದೃಢವಾಗಿ ತಿರಸ್ಕರಿಸಿದರು. “ನನಗೆ ನನ್ನದೇ ಆದ ರಾಜಕೀಯ ಶಕ್ತಿ ಇರುವುದರಿಂದ ಜನತಾ ದಳಕ್ಕೆ ಮರಳುವ ಅಗತ್ಯವಿಲ್ಲ; ನಿತೀಶ್ ಕುಮಾರ್ ಅವರೊಂದಿಗೆ ಇಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆದರೆ, ನಮ್ಮ ನಡುವೆ ಹೊಂದಾಣಿಕೆಗೆ ಪ್ರಯತ್ನ ನಡೆದಿಲ್ಲ” ಎಂದರು.
2023 ರಲ್ಲಿ ಜೆಡಿಯು ತೊರೆದ ನಂತರ, ಸಿಂಗ್ ನಿತೀಶ್ ಕುಮಾರ್ ಮೇಲೆ ಕಟುವಾದ ದಾಳಿಯನ್ನು ಪ್ರಾರಂಭಿಸಿದರು. ಅವರನ್ನು ‘ಪಾಲ್ಟಿ ಮಾರ್’ (ನಿಷ್ಠೆಯನ್ನು ಬದಲಾಯಿಸುವ ವ್ಯಕ್ತಿ) ಎಂದು ಕರೆದರು.
ಭ್ರಷ್ಟಾಚಾರ ಆರೋಪದ ಮೇಲೆ ಪಕ್ಷವು ಅವರಿಗೆ ನೋಟಿಸ್ ಕಳುಹಿಸಿದ ನಂತರ ಆರ್‌ಸಿಪಿ ಸಿಂಗ್ ಜೆಡಿಯು ತೊರೆದಿದ್ದರು. ನಿತೀಶ್ ಕುಮಾರ್ ತಮ್ಮ ಏಳು ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ ಎಂದು ರಾಜೀನಾಮೆ ನೀಡಿದ ನಂತರ ಹೇಳಿದ್ದ ಅವರು, ಜೆಡಿಯು ಪಕ್ಷವನ್ನು “ಮುಳುಗುತ್ತಿರುವ ಹಡಗು” ಎಂದು ಬಣ್ಣಿಸಿದ್ದರು.