ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕ್ರೈಮ್ ನ್ಯೂಸ್

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕ್ಕೆ ಓದು ನಿಲ್ಲಿಸಿದ ವಿಕ್ರಂ ಗೌಡ ನ ತಂದೆ… ಕೊನೆಗೆ ಪೊಲೀಸರ ಗುಂಡಿಗೆ ಬಲಿ

Published

on

ಡುಪಿ (ನ.20): ಸೋಮವಾರ ಮಧ್ಯರಾತ್ರಿ ಹೆಬ್ರಿ ತಾಲೂಕಿನ ಪೀತಬೈಲ್‌ ಎಂಬಲ್ಲಿನ ದಟ್ಟ ಕಾಡಿನಲ್ಲಿ ಪೊಲೀಸರ ಗುಂಡೇಟು ತಿಂದು ಹೆಣವಾಗಿ ಮಲಗಿದ್ದ ವಿಕ್ರಮ್ ಗೌಡ ಯಾನೆ ಶ್ರೀಕಾಂತ್‌ಗೆ 46 ವರ್ಷ ವಯಸ್ಸು, ಅವಿವಾಹಿತ, ಈತ ಹುಟ್ಟಿ ಬೆಳೆದದ್ದು ಇದೇ ಪೀತಬೈಲಿನ ಅನತಿ ದೂರದಲ್ಲಿರುವ ನಾಡ್ಪಾಲು ಗ್ರಾಮದ ಕೂಡ್ಲು ಎಂಬಲ್ಲಿಸುಮಾರು 20 ವರ್ಷಗಳ ಹಿಂದೆ ತಂದೆ, ತಾಯಿ, ತಂಗಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಗುಡಿಸಲಿನಂತಹ ಮನೆಯಲ್ಲಿ ವಾಸಿಸುತ್ತಿದ್ದ ವಿಕ್ರಮ್ ಗೌಡ, ಓದಿದ್ದು 5ನೇ ಕ್ಲಾಸ್. ಕಾಡಂಚಿನಲ್ಲಿ ವಾಸಿಸುವ ಎಲ್ಲರಂತೆ ಊರಲ್ಲೊಂದು ಸ್ವಂತ ತುಂಡು ಭೂಮಿಯಲ್ಲಿ ಗದ್ದೆ ತೋಟ ಮಾಡಿಕೊಂಡು ಬದುಕುವ ಕನಸು ಕಟ್ಟಿಕೊಂಡಿದ್ದ.

 

 

ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ವಿಕ್ರಮ್‌ನ ಓದು ಬಿಡಿಸಿದ ತಂದೆ, ಮಗ ತನ್ನಂತೆ ಜೀವನಪೂರ್ತಿ ಯಾರದ್ದೋ ಮನೆಯಲ್ಲಿ ಆಳಾಗುವುದು ಬೇಡ ಎಂದು ಮುಂಬೈಗೆ ಕಳುಹಿಸಿದರು. ಅಲ್ಲಿ ವಿಕ್ರಮ್ ಯಾರದ್ದೊ ಹೊಟೇಲಿನಲ್ಲಿ ಯಾರದ್ದೋ ಎಂಜಲು ಎತ್ತಿದ, ಪ್ಲೇಟು ಗ್ಲಾಸು ತೊಳೆದ, ಆದರೆ ಇದು ತನ್ನ ಜೀವನವಲ್ಲ ಎಂದು 20ರ ಹರೆಯದಲ್ಲಿ ಊರಿಗೆ ಮರಳಿ ಬಂದ. ಮುಂಬೈಯಿಂದ ಊರಿಗೆ ಮರಳಿದ್ದೇ ಆತನ ಜೀವನದ ಟರ್ನಿಂಗ್‌ ಪಾಯಿಂಟ್‌!

 

 

2002-03ರ ಹೊತ್ತಿನಲ್ಲಿ ಕುದುರೆಮುಖ ರಕ್ಷಣೆಯ ಕ್ರಾಂತಿ, ಕಾಡಂಚಿನ ಜನರ ಒಕ್ಕಲೆಬ್ಬಿಸುವ ವದಂತಿ ಹೇಳಿಕೊಂಡು ಇಲ್ಲಿನ ಮನೆಗಳಿಗೆ ಭೇಟಿ ನೀಡುತ್ತಿದ್ದ ಕರ್ನಾಟಕ ವಿಮೋಚನಾ ರಂಗದ ಕಾರ್ಯಕರ್ತರು ವಿಕ್ರಮ್‌ ಗೌಡನ ಮನೆಗೂ ಬಂದಿದ್ದರು. ಅವರು ಹೇಳುತಿದ್ದುದೆಲ್ಲಾ ಸರಿ ಅನ್ನಿಸಿ ಆತನೂ ಅವರೊಂದಿಗೆ ಸೇರಿಕೊಂಡು ಮನೆಮನೆಗೆ ಹೋಗಿ ಜನಾಭಿಪ್ರಾಯ ಮೂಡಿಸಲೆತ್ನಿಸಿದ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ. ಆತನ ಮನೆಯವರ ಪ್ರಕಾರ ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಆತನಿಗೆ ತೊಂದರೆ ಕೊಟ್ಟಿದ್ದರು.

ಈ ನಡುವೆ 2005ರಲ್ಲಿ ಚಿಕ್ಕಮಗಳೂರಿನ ಮೆಣಸಿನ ಹಾಡ್ಯದಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಸಾಕೇತ್ ರಾಜನ್‌ನನ್ನೂ ಭೇಟಿಯಾಗಿ ಅವರ ಪ್ರಜಾ ರಾಜ್ಯದ ಚಿಂತನೆಗಳಿಂದ ಪ್ರಭಾವಿತನಾದ, ಕೊನೆಗೆ ಊರಲ್ಲಿದ್ದು ಏನು ಸಾಧಿಸಲಾಗುವುದಿಲ್ಲ ಎಂದನ್ನಿಸಿದ ವಿಕ್ರಮ್, ಕಾಡು ಸೇರಿ ಬಂದೂಕು ಕೈಗೆತ್ತಿಕೊಂಡ. ಹೇಳಿಕೊಳ್ಳುವಂತಹ ಅಕ್ಷರಾಭ್ಯಾಸ ಇಲ್ಲದಿದ್ದರೂ, ಕರ್ನಾಟಕ- ಕೇರಳದ ನಕ್ಸಲರ ಮಧ್ಯೆ ತನ್ನದೇ ಪ್ರಭಾವ ಬೆಳೆಸಿಕೊಂಡಿದ್ದ.

 

 

 

ಸಾಕೇತ್‌ ರಾಜನ್ ಎನ್‌ಕೌಂಟರ್ ನಂತರ, ನೀಲಗುಳಿ ಪದ್ಮನಾಭ ಮಲೆನಾಡಿನ ನಕ್ಸಲ್‌ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದ, ಆತನ ಕಾಲಿಗೆ ಪೊಲೀಸರ ಗುಂಡು ಬಿದ್ದಾಗ, ಆತನ ಸ್ಥಾನಕ್ಕೆ ಬಂದಾತ ಕೃಷ್ಣಮೂರ್ತಿ, ಆತನೂ ಅನಾರೋಗ್ಯಕ್ಕೀಡಾದಾಗ, ಕೇರಳದ ಕಾಡಿನಿಂದ ಹೊರಗೆ ಬಂದು ಕರ್ನಾಟಕ ಮಲೆನಾಡಿನಲ್ಲಿ ನಕ್ಸಲ್ ಚುಕ್ಕಾಣಿ ಹಿಡಿದ ವಿಕ್ರಮ್ ಗೌಡ, ಕಳೆದ ಐದಾರು ವರ್ಷಗಳಿಂದ ಎರಡೂ ರಾಜ್ಯಗಳ ನಡುವೆ ತನ್ನ ತಂಡದೊಂದಿಗೆ ಓಡಾಡುತ್ತಿದ್ದ.

ಇದೀಗ ಕೇಂದ್ರ ಸರ್ಕಾರ ಶತಾಯಗತಾಯ ಪಶ್ಚಿಮ ಘಟ್ಟವನ್ನು ಉಳಿಸುವುದಕ್ಕಾಗಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಹೊರಟಿರುವುದರಿಂದ, ಮತ್ತೆ ಕಾಡಂಚಿನ ಜನರನ್ನು ಒಕ್ಕೆಲೆಬ್ಬಿಸುತ್ತಾರೆ ಎಂಬ ಗುಮ್ಮ ಗೂಂಗುಡುತ್ತಿರುವುದರಿಂದ, ಅದೇ ಕಾರಣಕ್ಕಾಗಿ ಕಾಡಂಚಿನಲ್ಲಿ ಸಂತ್ರಸ್ತ ಜನರ ಸಭೆ ನಡೆಸಲಾರಂಭಿಸಿದ್ದ ವಿಕ್ರಮ್‌ ಗೌಡ. ಇದು ಹೀಗೆ ಮುಂದುವರಿದರೆ ಆಡಳಿತ ವ್ಯವಸ್ಥೆಗೆ ತಲೆನೋವಾಗುವ ಸಾಧ್ಯತೆ ಇತ್ತು.

 

ಅದಕ್ಕೆ ಮೊದಲೇ ವಿಕ್ರಮ್ ಗೌಡನ ತಂಡದ ಸಭೆ, ಓಡಾಟ, ಆಹಾರ ಸಂಗ್ರಹದ ಮೇಲೆ ಹದ್ದಿನ ಕಣ್ಣಿಟ್ಟ ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸರು, ಸೋಮವಾರ ಮನೆಯೊಂದಕ್ಕೆ ಅಕ್ಕಿ, ಬೇಳೆ ತರಲು ಬಂದ ಕಬಿನಿ ದಳಂ 2ರ ಮೇಲೆ ಮುಗಿಬಿದ್ದಿದೆ. ತಂಡವನ್ನು ಮುನ್ನಡೆಸುತ್ತಿದ್ದ ವಿಕ್ರಮ್ ಗೌಡ ನೇರವಾಗಿ ಪೊಲೀಸರ ಗುಂಡಿಗೆ ಎದೆಯೊಡ್ಡಿದ್ದಾನೆ, ಇನ್ನೊಂದಿಬ್ಬರಿಗೆ ಗುಂಡೇಟು ಬಿದ್ದ ಶಂಕೆ ಇದೆ.

ತನ್ನೂರಲ್ಲಿ ಸ್ವಂತ ಭೂಮಿಯಲ್ಲಿ ಗದ್ದೆ, ತೋಟ ಮಾಡುವ, ಪ್ರಜಾರಾಜ್ಯ ಕಟ್ಟುವ ಕನಸು ಕಂಡಿದ್ದ ವಿಕ್ರಮ್ ಗೌಡ ಅದ್ಯಾವುದು ನನಸಾಗದೇ ತನ್ನೂರಿನಲ್ಲಿಯೇ ಮಣ್ಣಾಗಿದ್ದಾನೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version