Connect with us

ಇತರ

ಫೆ 4ರಿಂದ,ಕೋಡಿಂಬಾಡಿ ಸ ಹಿ ಪ್ರಾ ಶಾಲೆಯಲ್ಲಿ ಉಪ್ಪಿನಂಗಡಿ ಕಾಲೇಜಿನ ಎನ್ಎಸ್ಎಸ್ ಶಿಬಿರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಸಜ್ಜು

Published

on

ವಿದ್ಯಾರ್ಥಿಗಳಿಗೆ ಅನುಭವದ ಮೂಲಕ ಶಿಕ್ಷಣವನ್ನು ನೀಡುವ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಜೀವನದ ಅಪೂರ್ವ ವೇದಿಕೆ. ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮುದಾಯದ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಗುಣವನ್ನು ಬೆಳೆಸುವ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಶ್ರಮದಾನದ ಮೂಲಕ ಶ್ರಮಿಕ ವರ್ಗವನ್ನು ಗೌರವಿಸುವ, ಪರಸ್ಪರ ಸಹಕರಿಸಿ ಜೀವಿಸುವ ಮೂಲಕ ಉದಾರ ಮನೋಭಾವವನ್ನು ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆ ಪ್ರಸ್ತುತ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದೆ.

 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಈ ವರ್ಷದ ವಾರ್ಷಿಕ ವಿಶೇಷ ಶಿಬಿರವು ದಿನಾಂಕ 04-02-2025 ರಿಂದ 10.02.2025ರ ತನಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ ಇಲ್ಲಿ ಜರುಗಲಿದೆ. “ನನ್ನ ಭಾರತಕ್ಕಾಗಿ ಯುವ ಜನತೆ ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವ ಜನತೆ” ಎಂಬ ಶಿರೋನಾಮೆಯಲ್ಲಿ ಆಯೋಜನೆಗೊಳ್ಳಲಿರುವ ಈ ಶಿಬಿರಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಅಶೋಕ್ ಕುಮಾರ್ ರೈ ಚಾಲನೆ ನೀಡಲಿರುವರು. ದೈನಂದಿನ ಕಾರ್ಯಕ್ರಮಗಳಲ್ಲಿ ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ಸಾರ್ವಜನಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅವಲೋಕನ ಒಳಗೊಂಡಿದೆ.

ಶೈಕ್ಷಣಿಕ ಕಾರ್ಯಕ್ರಮಗಳು 

ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನದ ಉದ್ದೇಶವನ್ನು ಇಟ್ಟುಕೊಂಡು ಪ್ರತಿ ದಿನ ಅಪರಾಹ್ನ 02:30ಕ್ಕೆ ಆಯೋಜನೆಗೊಳ್ಳಲಿರುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ವ್ಯಕ್ತಿಗಳಿಂದ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಜರುಗಳಿರುವುದು. ಶ್ರೀ ಮೌನೇಶ್ ವಿಶ್ವಕರ್ಮ ಇವರ ‘ರಂಗದ ಮೂಲಕ ಡಿಜಿಟಲ್ ಸಾಕ್ಷರತೆ’, ಶ್ರೀ ದೀಕ್ಷಿತ್ ಕುಮಾರ್ ಪುತ್ತೂರು ಇವರಿಂದ ‘ವೃತ್ತಿ ನಿರ್ಮಾಣ ಮತ್ತು ಡಿಜಿಟಲ್ ತಂತ್ರಜ್ಞಾನ’, ಶ್ರೀ ಶಿವಪ್ರಸಾದ್ ಕೆ ಆರ್ ಇವರಿಂದ ‘ಮನೋವಿಕಸನ ಆಟಗಳು’, ಡಾ. ನಂದೀಶ್ ವೈಡಿ ಇವರಿಂದ ‘ಎನ್ ಎಸ್ ಎಸ್ ಮತ್ತು ನಾಯಕತ್ವ ಗುಣಗಳು’, ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್ ಇವರಿಂದ ‘ಮೈ ಭಾರತ್ ಪೋರ್ಟಲ್ ಮತ್ತು ಅವಕಾಶಗಳು’, ಶಿಬಿರ ಅಧಿಕಾರಿಗಳಿಂದ ‘ಶಿಬಿರದ ಕಲಿಕೆ ಮತ್ತು ಅನುಷ್ಠಾನ – ಒಂದು ಅವಲೋಕನ’ ಎಂಬ ವಿಷಯಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮಗಳು ಜರುಗಲಿರುವುದು. ಹಾಗೂ ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಆಯೋಜನೆಗೊಳ್ಳಲಿದೆ.

 

ಸಾರ್ವಜನಿಕ ಸಭಾ ಕಾರ್ಯಕ್ರಮಗಳು

ಶಿಬಿರಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪ್ರಚಲಿತ ವಿದ್ಯಮಾನದ ವಿಷಯಗಳು ಸಂಬಂಧಪಟ್ಟಹಾಗೆ ವಿಶೇಷ ಉಪನ್ಯಾಸವನ್ನು ಒಳಗೊಂಡ ಸಾರ್ವಜನಿಕ ಸಭಾ ಕಾರ್ಯಕ್ರಮವು ಪ್ರತಿದಿನ ಸಾಯಂಕಾಲ 6:30ಕ್ಕೆ ಜರುಗಳಿದೆ. ಇದರಲ್ಲಿ ಶ್ರೀ ಸುಪ್ರೀತ್ ಕೆ ಸಿ ಇವರಿಂದ ‘ಡಿಜಿಟಲ್ ಸಾಕ್ಷರತೆ – ಸ್ವಯಂಸೇವಕರ ಪಾತ್ರ’, ಹೇಮಾ ಶುಭಾಷಿಣಿ ಇವರಿಂದ ‘ಸೈಬರ್ ಸುರಕ್ಷತೆ- ಏಕೆ? ಹೇಗೆ?’, ಡಾ. ವಿಜಯಕುಮಾರ್ ಮಳೆಯಾರ್ ಇವರಿಂದ ‘ಸೇವಾ ಮನೋಭಾವ- ಹೊಸ ದೃಷ್ಟಿಕೋನ’, ಶ್ರೀ ಲಕ್ಷ್ಮಿಕಾಂತ್ ಅನಿಕೂಟೇಲ್ ಇವರಿಂದ ‘ಡಿಜಿಟಲ್ ಯುಗದ ಅವಕಾಶಗಳು ಮತ್ತು ಸವಾಲುಗಳು’, ಡಾ. ಪ್ರಮೋದ್ ಎಂ ಜಿ ಇವರಿಂದ ‘ಕೃಷಿ ಕ್ಷೇತ್ರ: ಸಾಧ್ಯತೆ ಮತ್ತು ಸವಾಲುಗಳು’ ಹಾಗೂ ಶ್ರೀ ದಾಮೋದರ ಕಣಜಾಲು ಇವರಿಂದ ‘ಡಿಜಿಟಲ್ ಜಗತ್ತು ಮತ್ತು ಸೇವಾ ಕ್ಷೇತ್ರ’ ಎಂಬ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಳಿರುವುದು.

ಡಿಜಿಟಲ್ ಸಾಕ್ಷರತಾ ಕೇಂದ್ರ

ಈ ವರ್ಷದ ಎನ್ ಎಸ್ ಎಸ್ ಶಿಬಿರದ ವಿಶೇಷತೆಯಾಗಿ ಶಿಬಿರ ಸ್ಥಳದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಮೂಡಿಸುವ ಉದ್ದೇಶದಿಂದ ಡಿಜಿಟಲ್ ಸಾಕ್ಷರತಾ ಕೇಂದ್ರವನ್ನು ತೆರೆಯಲಾಗುವುದು ಇಲ್ಲಿ ಶಿಬಿರ ಸ್ಥಳಕ್ಕೆ ಭೇಟಿ ನೀಡುವ ಸಾರ್ವಜನಿಕರಲ್ಲಿ ತಂತ್ರಜ್ಞಾನದ ಉಪಯೋಗಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಸಂಗ್ರಹಿಸಿ, ಅವಶ್ಯಕತೆ ಇರುವ ಮಾಹಿತಿಗಳ ವಿನಿಮಯ ಮಾಡಲಾಗುವುದು ಬ್ಯಾಂಕಿಂಗ್ ಕ್ಷೇತ್ರ ಸಾರ್ವಜನಿಕ ವಲಯ ಸರ್ಕಾರಿ ವ್ಯವಸ್ಥೆಗಳ ಬಗ್ಗೆ ಇರುವ ಆಪ್ ಗಳನ್ನು ಪರಿಚಯಿಸಿ ಅದನ್ನು ಉಪಯೋಗಿಸುವ ವಿಧಾನಗಳನ್ನು ಮತ್ತು ಉಪಯೋಗದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮವನ್ನು ವಿವರಿಸಲಾಗುವುದು.

 

ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರ

ದಿನಾಂಕ 09.02.2025 ರಂದು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಪುತ್ತೂರು ವಲಯ ಹಾಗೂ ಸಮುದಾಯ ದಂತ ಆರೋಗ್ಯ ಕೇಂದ್ರ ಕೆವಿಜಿ ಸುಳ್ಯ ಇವುಗಳ ಸಹಯೋಗದೊಂದಿಗೆ ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರ ಆಯೋಜನೆಗೊಳ್ಳಲಿದೆ. ಪ್ರತಿದಿನ ಸಾಯಂಕಾಲ 7:45 ಕ್ಕೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸಾಯಂಕಾಲ 5:00 ಗಂಟೆಗೆ ಶಿಬಿರಾರ್ಥಿಗಳಿಗೆ ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗುವುದು. ಶಿಬಿರದ ವಿಶೇಷ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಪುತ್ತೂರು ತಾಲೂಕಿನ ಹಿರಿಯ ಎನ್ ಎಸ್ ಎಸ್ ಸ್ವಯಂಸೇವಕರೊಂದಿಗೆ ಸಂವಾದ ಕಾರ್ಯಕ್ರಮಗಳು ಜರುಗಲಿದೆ.

 

ದಿನಾಂಕ 10.02.2025 ರಂದು ಸಾಯಂಕಾಲ 06.30 ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ವಿವೇಕಾನಂದ (ಸ್ವಾಯತ್ತ) ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾಗಿರುವ ಡಾ. ಅರುಣ್ ಪ್ರಕಾಶ್ ಸಮಾರೋಪ ಭಾಷಣ ಮಾಡಲಿರುವರು. ಅದೇ ದಿನ ರಾತ್ರಿ 10.30 ಕ್ಕೆ ಶಿಬಿರ ಜ್ಯೋತಿ ಕಾರ್ಯಕ್ರಮದ ಮೂಲಕ ವಾರ್ಷಿಕ ವಿಶೇಷ ಶಿಬಿರಕ್ಕೆ ತೆರೆ ಎಳೆಯಲಾಗುವುದು. ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರೂ ಸಾಮಾಜಿಕ ಮುಖಂಡರು ಆಗಿರುವ ಶ್ರೀ ಜಯಪ್ರಕಾಶ್ ಬದಿನಾರು, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ, ಮುಖ್ಯ ಗುರುಗಳಾದ ಶ್ರೀ ಬಾಲಕೃಷ್ಣ ಎನ್ ಹಾಗೂ ಗ್ರಾಮದ ಸಮಸ್ಥರ ಸಹಕಾರದೊಂದಿಗೆ ಶಿಬಿರ ಆಯೋಜನೆಗೊಳ್ಳಲಿರುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಮಾರ್ಗದರ್ಶನದೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಸ್ ಇವರ ನಿರ್ದೇಶನದಂತೆ ಈ ಶಿಬಿರ ಅನುಷ್ಠಾನಗೊಳ್ಳಲಿದೆ. ಶಿಬಿರ ಅಧಿಕಾರಿಗಳಾಗಿ ಡಾ. ಹರಿಪ್ರಸಾದ್ ಎಸ್, ಶ್ರೀ ಕೇಶವ ಕುಮಾರ ಬಿ, ಸಂಧ್ಯಾ ಎಂ ಮತ್ತು ಸೀಮಾ ಕಾರ್ಯನಿರ್ವಹಿಸಲಿರುವರು. ಸ್ವಯಂಸೇವಕರುಗಳಾದ ಲಾವಣ್ಯ, ಮನೀಶ್ ಯು, ಅಶ್ವಿನಿ ಎಂ, ಪ್ರಸನ್ನ ಜಿ ಮತ್ತು ರಮ್ಯಾ ಶಿಬಿರದ ನಾಯಕತ್ವ ವಹಿಸಲಿರುವರು.

Continue Reading
Click to comment

Leave a Reply

Your email address will not be published. Required fields are marked *

Advertisement