Published
1 year agoon
By
Akkare News
ಪ್ರತಿಯೊಂದು ಪುಸ್ತಕವನ್ನು ಓದುವಾಗ ಆಸಕ್ತಿ ಇಟ್ಟು ಓದಬೇಕು. ಜ್ಞಾನಪಡೆಯಲು, ವಿಷಯ ಸಂಗ್ರಹಣೆ, ಜಾಗೃತಿಯನ್ನು ಉಂಟುಮಾಡಲು ಹಾಗೂ ಮನಸ್ಸಿನ ಶಕ್ತಿ ವೃದ್ಧಿಗಾಗಿ ಮನಸಿದ್ದು ಓದಬೇಕು ಎಂದು ವಿವೇಕಾನಂದ (ಸ್ವಾಯತ್ತ) ಕಾಲೇಜು ಪುತ್ತೂರು ಇಲ್ಲಿನ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ಪ್ರಮೋದ್ ಎಂ.ಜಿ ಹೇಳಿದರು. ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂರನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, “ಓದುವ ಹವ್ಯಾಸ” ಎಂಬ ವಿಷಯದ ಕುರಿತು ಮಾತನಾಡಿದರು. ಹೊಸ ಹೊಸ ವಿಷಯಗಳ ಬಗ್ಗೆ ಓದಿದಾಗ ನಮ್ಮ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಹೆಚ್ಚು ಓದಿದಾಗ ಮಾತನಾಡುವ ಧೈರ್ಯ ಬರುತ್ತದೆ.


ನಮ್ಮ ಮೇಲೆ ವಿಶ್ವಾಸ ಇಟ್ಟುಕೊಳ್ಳಬೇಕು ಆ ವಿಶ್ವಾಸ ಬರುವುದು ಪುಸ್ತಕ ಓದಿದಾಗ ಹಾಗೂ ಓದುವ ಸಂದರ್ಭದಲ್ಲಿ ಪ್ರಶಾಂತವಾಗಿರುವ ವಾತಾವರಣದಲ್ಲಿ ಓದಬೇಕು. ಓದಿದ್ದನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಬೇಕು ಆಗ ನಮಗೂ ನೆನಪಾಗುತ್ತದೆ ಅವರಿಗೂ ಮಾಹಿತಿ ಸಿಗುತ್ತದೆ. ಪ್ರತಿದಿನ ಓದಲು ಸಮಯವನ್ನು ನಿಗದಿಪಡಿಸಬೇಕು ನಮಗೆ ಇಷ್ಟವಿರುವ ಪುಸ್ತಕವನ್ನು ಮೊದಲು ಓದಬೇಕು. ಓದುವ ಹವ್ಯಾಸ ನಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಹಾಗೂ ಶ್ರೀ ಕೇಶವ ಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು. ಸ್ವಯಂಸೇವಕೀಯರಾದ ಸಂಗೀತಾ,ತ್ರಿಷಾ, ಪ್ರಿಯಲತಾ, ಪುಷ್ಪಾವತಿ, ಹಾಗೂ ಸಿಂಚನಾ ಎ.ಎಲ್ ಪ್ರಾರ್ಥನೆ ಹಾಡಿದರು. ಜನನಿ ಪಿ.ಬಿ ಸ್ವಾಗತಿಸಿದರು, ದಿವ್ಯಾ ಎಂ ವ್ಯಕ್ತಿ ಪರಿಚಯ ಮಾಡಿದರು, ಅರ್ಪಿತಾ ವಂದಿಸಿದರು ಹಾಗೂ ರಮ್ಯಾ ಕಾರ್ಯಕ್ರಮ ನಿರ್ವಹಿಸಿದರು.





