Published
2 days agoon
By
Akkare Newsವಿದ್ಯಾರ್ಥಿ ಜೀವನದ ಪ್ರತಿಯೊಂದು ಹಂತವು ಅವಕಾಶಗಳ ಆಗರವಾಗಿದ್ದು ವಿದ್ಯಾರ್ಥಿಗಳು ಅವಕಾಶಗಳನ್ನು ಕಂಡುಕೊಂಡು ಸಮರ್ಪಕವಾಗಿ ಉಪಯೋಗಿಸಿದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತೇಜಸ್ವಿ ಕುಮಾರ್ ಜೆ ಹೇಳಿದರು. ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಎಂಟನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ದೈನಂದಿನ ಜೀವನಕ್ಕೆ ಅರ್ಥಶಾಸ್ತ್ರ” ಎಂಬ ವಿಷಯದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ತಮ್ಮ ಜ್ಞಾನದ ಮೌಲ್ಯ ಎಷ್ಟಿದೆ ಎಂಬುವುದನ್ನು ಆತ್ಮವಲೋಕನ ಮಾಡಿ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳಬೇಕು, ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತಾ ಮತ್ತು ಸಮಯವನ್ನು ಮಾರ್ಪಕವಾಗಿ ಬಳಸುತ್ತಾ ಉತ್ತಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಶ್ರೀ ಕೇಶವ ಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು. ಸ್ವಯಂ ಸೇವಕಿಯರಾದ ಶ್ರೇಷ್ಠ, ಮನ್ವಿತ ಪ್ರಾರ್ಥಿಸಿದರು. ವರ್ಷ ಸ್ವಾಗತಿಸಿದರು, ಸನಿಧ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ಜೀವಿತ ವಂದಿಸಿದರು ಹಾಗೂ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.