Connect with us

ಇತ್ತೀಚಿನ ಸುದ್ದಿಗಳು

ಕಾಡಾನೆ ದಾಳಿ; ಬೆಳ್ತಂಗಡಿ ತಾಲೂಕಿನಲ್ಲಿ ಎರಡನೇ ಸಾವು; ಜನರ ಆಕ್ರೋಶ

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗುರುವಾರ ನಡೆದಿರುವುದು ಕಾಡಾನೆ ಹಾವಳಿಯಿಂದ ಮಾನವ ಜೀವಹಾನಿಯ ಎರಡನೇ ಘಟನೆ.

ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ  ಸೋಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿ ಆತ ಮೃತಪಟ್ಟ ಘಟನೆ ಜು. 17 ರಂದು ನಡೆದಿದೆ.

ಮೃತ ವ್ಯಕ್ತಿ ಸೌತಡ್ಕದ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂದು ತಿಳಿದುಬಂದಿದೆ.


ಬೆಳ್ಳಂಬೆಳ್ಳಗೆ ಎರಡು ಆನೆಗಳು ಗೇರು ಪ್ಲಾಂಟೇಶನ್ ನಲ್ಲಿ ತಿರುಗಾಡುತ್ತಿದ್ದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಆನೆ ಓಡಿಸುವ ಸಂದರ್ಭದಲ್ಲಿ ಆನೆಯು ತಿರುಗಿ ಬಂದು ನಡೆದುಕೊಂಡು ಹೋಗುತ್ತಿದ್ದ ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೊಂಡಿಲಿನಿಂದ ತಿವಿದು, ಗಂಭೀರ ಗಾಯಗೊಳಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಈ ಹಿಂದೆ ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ 2010ರ ನ. 8ರಂದು ಶಿವಪ್ಪ ಮೂಲ್ಯ (65) ಅವರು ಕಾಡಿಗೆ ಹಸು ಮೇಯಿಸಿಕೊಂಡು ಹೋಗಿ ಬರುವಾಗ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿತ್ತು. ಬಳಿಕದ ದಿನಗಳಲ್ಲಿ ನಿರಂತರವಾಗಿ ಕೃಷಿ ಮೇಲಷ್ಟೇ ಕಾಡಾನೆಗಳು ಪ್ರಕೋಪ ತೋರಿಸುತ್ತಿದ್ದವು. ಎರಡು ವರ್ಷಗಳ ಹಿಂದೆ ನೆರಿಯ ಬಳಿ ಒಂಟಿ ಸಲಗ ಕಾರನ್ನು ಅಡ್ಡಗಟ್ಟಿ ಅದರಲ್ಲಿದ್ದ ಒಂದೇ ಕುಟುಂಬದ 7 ಮಂದಿಯ ಮೇಲೆ ಎರಗಿತ್ತು. ಅದೃಷ್ಟವಶಾತ್‌ ಕಾರಿನಲ್ಲಿದ್ದ ಮಂದಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದರು.

ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕುಗಳಲ್ಲಿ ಕಾಡಾನೆ ಹಾವಳಿ ಇತ್ತೀಚೆಗಿನ ವರ್ಷಗಳಲ್ಲಿ ಮಾಮೂಲಿ ಎಂಬಂತಾಗಿದೆ. ಪುತ್ತೂರು ತಾಲೂಕಿನ ಕೊಳ್ತಿಗೆ ಭಾಗದಲ್ಲಿ ಇತ್ತೀಚೆಗೆ ಓರ್ವ ಮಹಿಳೆ, ಕೆಲವು ವರ್ಷಗಳ ಹಿಂದೆ ಕಡಬ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು.

ಬೆಳ್ತಂಗಡಿ ತಾಲೂಕಿಗೆ ಹೊಂದಿಕೊಂಡಂತೆ ಪಶ್ಚಿಮ ಘಟ್ಟ ಅರಣ್ಯ ಹಾದುಹೋಗುವುದರಿಂದ ಶಿರ್ಲಾಲು, ಚಾರ್ಮಾಡಿ, ಶಿಶಿಲ ಭಾಗವಾಗಿ, ಶಿರಾಡಿ, ಸುಬ್ರಹ್ಮಣ್ಯ, ಸಂಪಾಜೆಯಾಗಿ ಮಡಿಕೇರಿಯವರೆಗೆ ಕಾಡಾನೆ ಹಿಂಡು, ಒಂಟಿಸಲಗ, ಜೋಡಿ ಆನೆಗಳ ಸಂಚಾರ ಮಾಮೂಲಿ ಎಂಬಂತೆ ನಡೆಯುತ್ತಿದೆ. ಅನೇಕ ಬಾರಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿಸಲಗ ವಾಹನ ಸವಾರರಿಗೆ ಎದುರಾಗುತ್ತಿದೆ. ವಾರದಲ್ಲಿ ಕನಿಷ್ಠ ಪಕ್ಷ ಒಂದೆರಡು ಬಾರಿ ಕಾಡಾನೆಗಳು ನಾಡಿಗೆ ಬಂದು ತೋಟಗಳನ್ನು ಧ್ವಂಸ ಮಾಡುತ್ತಿವೆ.

ಕೃಷಿಕರ ಆಕ್ರೋಶ
ಪ್ರತೀ ಬಾರಿ ಕಾಡಿನಿಂದ ನಾಡಿಗೆ ಇಳಿಯುವ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆ ಮೃದು ಧೋರಣೆ ತೋರುತ್ತಿದೆ. ಕಾಡಿಗೆ ಅಟ್ಟುವ ಕೆಲಸ, ಪಟಾಕಿ ಸಿಡಿಸುವ ಸಲಹೆ, ಆನೆಕಂದಕ ನಿರ್ಮಾಣ, ಸೋಲಾರ್‌ ಬೇಲಿ ರಚಿಸಿದರೂ ಪರಿಣಾಮಕಾರಿಯಾಗಿಲ್ಲ. ಈ ಬಾರಿ ಆನೆಯನ್ನು ಕಾಡಿಗಟ್ಟುವ ಬದಲು ಸೆರೆ ಹಿಡಿಯಲೇಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಕರಾವಳಿ ಭಾಗದ ಶಾಸಕರು, ಸಚಿವರು ಸದನದಲ್ಲಿ ಅನೇಕ ಬಾರಿ ಸಮಸ್ಯೆಯ ಗಂಭೀರತೆ ಬಗ್ಗೆ ಚರ್ಚಿಸಿದರೂ ಪರಿಹಾರ ಲಭ್ಯವಾಗಿಲ್ಲ. ಮೂರು ವರ್ಷಗಳ ಹಿಂದೆ ಮುಂಡಾಜೆಗೆ ಆನೆ ಹಿಡಿಯುವ ತಂಡ ಬಂದರೂ ಕಾಡಾನೆಗಳ ಸುಳಿವೇ ಸಿಕ್ಕಿರಲಿಲ್ಲ. ಒಟ್ಟಾರೆ ಕೃಷಿಕರು, ಮಕ್ಕಳು ಜೀವಭಯದಿಂದಲೇ ದಿನ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರೀಶ್‌ ಪೂಂಜ ಆಕ್ರೋಶ
ಕಾಡಾನೆ ದಾಳಿಯಲ್ಲಿ ಬಾಲಕೃಷ್ಣ ಶೆಟ್ಟಿಯವರು ಮೃತಪಟ್ಟ ಘಟನೆಗೆ ಶಾಸಕ ಹರೀಶ್‌ ಪೂಂಜ ದುಃಖ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿ ಬಗ್ಗೆ ತಾನು ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದರೂ ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಸರಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರಕಾರ ಎಚ್ಚೆತ್ತು ಆನೆ ದಾಳಿ ಮಾಡುವ ಕೃಷಿ ಪ್ರದೇಶ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸೂಕ್ತ ತಡೆಬೇಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು, ಮೃತ ಬಾಲಕೃಷ್ಣ ಶೆಟ್ಟಿಯವರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಬಿಡುಗಡೆ ಮಾಡುವಂತೆ ಶಾಸಕ ಹರೀಶ್‌ ಪೂಂಜ ಸರಕಾರವನ್ನು ಆಗ್ರಹಿಸಿದ್ದಾರೆ. ಮೃತರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇಲ್ಲಿರುವ ಕಾಡಾನೆಯನ್ನು ಇಲಾಖೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

 

 

ಅರಣ್ಯ ಸಚಿವರಿಗೆ ರಕ್ಷಿತ್‌ ಶಿವರಾಂ ಮನವಿ
ಘಟನೆಯ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಅವರು ಆಘಾತ ವ್ಯಕ್ತಪಡಿಸಿದ್ದು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆನೆ-ಮಾನವ ಸಂಘರ್ಷದಿಂದ ತಾಲೂಕಿನಲ್ಲಿ ಹೆಚ್ಚಿನ ನಷ್ಟ ಹಾಗೂ ಸಾವು ಸಂಭವಿಸುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಹಾಗೂ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಿದರು. ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement