Connect with us

ಇತರ

ಅಬ್ಬರದ ಮಳೆಗೆ ವಿರಾಮ, ಕೃಷಿಕ ಚುರುಕು: ಎಳೆ ಅಡಿಕೆ ಉಳಿಸಿಕೊಳ್ಳಲು ಗೋಲ್ಡನ್‌ ಅವರ್‌!

Published

on

ಪುತ್ತೂರು :ಸತತವಾಗಿ ಸುರಿಯುತ್ತಿದ್ದ ಮಳೆಗೆ ಸೋಮವಾರ ಕೊಂಚ ಬಿಡುವು ದೊರೆತ ಬೆನ್ನಲ್ಲೇ ಅಡಿಕೆ ಬೆಳೆಗಾರರು ರಣೋತ್ಸವದಲ್ಲಿ ಔಷಧ ಸಿಂಪಡಣೆಯಲ್ಲಿ ತೊಡಗಿದ್ದಾರೆ. ಒಂದರ್ಥದಲ್ಲಿ ಕೊಳೆ ರೋಗಕ್ಕೆ ಸಿಲುಕಿ ಧರೆಶಾಹಿಯಾಗುವ ಹಂತದಲ್ಲಿದ್ದ ಎಳೆ ಅಡಿಕೆಯನ್ನು ಬದುಕಿಸಲು ಸಿಕ್ಕ ಗೋಲ್ಡನ್‌ ಅವರ್‌..!
ಸೋಮವಾರ ಬೆಳಗ್ಗೆಯಿಂದಲೇ ಸಣ್ಣದಾಗಿ ಕಾಣಿಸಿಕೊಂಡ ಬಿಸಿಲು ಹೊತ್ತು ದಾಟುತ್ತಿದ್ದಂತೆ ಕಪ್ಪು ಮೋಡವನ್ನು ಹಿಂದಿಕ್ಕಿತ್ತು. ಇದೇ ಸಂದರ್ಭವನ್ನು ಕಾಯುತ್ತಿದ್ದ ಅಡಿಕೆ ಬೆಳೆಗಾರರು ಕೃಷಿ ತೋಟಕ್ಕೆ ಇಳಿದು ಫಸಲು ಉಳಿಸಿಕೊಳ್ಳಲು ಕಸರತ್ತಿನಲ್ಲಿ ತೊಡಗಿದ್ದು ಕಂಡು ಬಂದಿತು. ಕಾರ್ಮಿಕರ ಕೊರತೆಯಿಂದ ಮನೆ ಮಂದಿಯೂ ಸಹಯೋಗ ನೀಡಿದ್ದು ವಿಶೇಷ.

ಔಷಧ ಸಿಂಪಡಣೆ
ಬಿಟ್ಟು ಬಿಡದೆ ಮಳೆ ಸುರಿದ ಪರಿಣಾಮ ಕೊಳೆರೋಗ ವ್ಯಾಪಕವಾಗಿ ಹಬ್ಬಿದ್ದು ನಷ್ಟದ ಭೀತಿ ಎದುರಾಗಿದೆ. ಔಷಧ ಸಿಂಪಡಣೆಗೆ ಮಳೆ ಅಡ್ಡಿ ಉಂಟು ಮಾಡಿದ ಕಾರಣ ಭಾರೀ ಪ್ರಮಾಣದ ಫಸಲು ನಷ್ಟದ ಆತಂಕ ಮೂಡಿತ್ತು. ಹೀಗಾಗಿ ಮಳೆಯ ಅಲ್ಪ ವಿರಾಮಕ್ಕೆ ಕಾಯುತ್ತಿದ್ದ ಬೆಳೆಗಾರರು ಕಾಯುತ್ತಿದ್ದರು. ಎರಡು ಮೂರು ದಿನಗಳಿಂದ ಔಷಧ ಹದ ಮಾಡಿ ಇರಿಸಿದ್ದ ತೋಟಗಳಲ್ಲಿ ಬೆಳಗ್ಗೆಯಿಂದ ಸಿಂಪಡಣೆ ಕಾರ್ಯ ನಡೆದರೆ, ಇನ್ನೂ ಕೆಲ ತೋಟಗಳಲ್ಲಿ ತತ್‌ಕ್ಷಣ ಬೋಡೋì ದ್ರಾವಣ ಸಿದ್ದಪಡಿಸಿ ಸಿಂಪಡಿಸಲಾಗಿದೆ.


ಕಾರ್ಮಿಕರ ಕೊರತೆ ಬೆಳೆಗಾರನ ಸಾಹಸ..!
ಔಷಧ ಸಿಂಪಡಣೆಗೆ ಕಾರ್ಮಿಕರ ಕೊರತೆ ಹೆಚ್ಚಾಗಿತ್ತು. ಲಭ್ಯ ಇರುವ ಕಾರ್ಮಿಕರು ಈ ಮೊದಲೇ ನಿಗದಿಪಡಿಸಿದ ತೋಟಕ್ಕೆ ತೆರಳಿ ಔಷಧ ಸಿಂಪಡಣೆ ಯಲ್ಲಿ ತೊಡಗಿದರು. ಒಂದು ಬಾರಿಯೂ ಔಷಧ ಸಿಂಪಡಣೆ ಸಾಧ್ಯವಾಗದ ತೋಟಗಳಲ್ಲಿ ಕಾರ್ಮಿಕನಿಗೆ ಕಾದು ಸುಸ್ತಾಗಿದ್ದ ಬೆಳೆಗಾರು ತಾವೇ ಏಣಿ ಬಳಸಿ ಔಷಧ ಸಿಂಪಡಿಸುತ್ತಿದದ್ದು ಕಂಡು ಬಂತು. ಅಡಿಕೆ ಮರಕ್ಕೆ 30 ಫೀಟ್‌ನ ಏಣಿಯಲ್ಲಿ ಏರಿ ಅದರ ತುದಿ ಭಾಗದಲ್ಲಿ ನಿಂತು ನಂತರ ಗೊನೆಗೆ ಮದ್ದು ಸಿಂಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿದ್ಯುತ್‌ ವ್ಯತ್ಯಯ ನೀರಿನ ಸಮಸ್ಯೆ..!
ಸಾಮಾನ್ಯವಾಗಿ 200 ಲೀಟರ್‌ ಸಾಮರ್ಥ್ಯದ ಬ್ಯಾರೆಲ್‌ ಅನ್ನು ತೋಟದಲ್ಲಿ ಇರಿಸಿ ನೀರು ತುಂಬಿಸಿ ಆ ಬಳಿಕ ಔಷಧ ಮಿಶ್ರಣ ಮಾಡಿ ಸಿಂಪಡಣೆ ಕೆಲಸ ಶುರು ಮಾಡುತ್ತಾರೆ. ಈ ಬಾರಿ ನೀರಿನ ಪೂರೈಕೆಯ ಕೊರತೆ ಉಂಟಾಗಿತ್ತು. ಮೂರು ದಿನಗಳಿಂದ ಸುರಿದ ಗಾಳಿ ಮಳೆಯ ಪರಿಣಾಮ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ 145 ಕಂಬಕ್ಕೆ, 8 ಟಿಸಿಗೆ ಹಾನಿ ಉಂಟಾಗಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಪಂಪ್‌ ಚಾಲೂ ಆಗದೆ ಬಾವಿ, ಕೆರೆಗಳಿಂದ ನೀರು ಹೊತ್ತು ಬ್ಯಾರೆಲ್‌ ಭರ್ತಿ ಮಾಡುವ ಸ್ಥಿತಿ ಉಂಟಾಯಿತು ಎನ್ನುತ್ತಾರೆ ಕೃಷಿಕ ಲಿಂಗಪ್ಪ ಗೌಡ.

ಔಷಧ, ಯಂತ್ರಕ್ಕೆ ಬೇಡಿಕೆ
ಏಕಾಏಕಿ ಮಳೆ ಇಳಿದ ಕಾರಣ ಮದ್ದು ಬಿಡುವ ಯಂತ್ರಕ್ಕೆ ಬೇಡಿಕೆ ಕಂಡು ಬಂದಿದೆ. ಗಾಳಿ ಹಾಕಿ ಮದ್ದು ಬಿಡಲು ಹೆಚ್ಚಿನ ಸಮಯ, ಕಾರ್ಮಿಕ ಅಗತ್ಯ ಇರುವ ಕಾರಣ ಮೋಟಾರ್‌ ಆಧಾರಿತ ಯಂತ್ರಗಳ ಬಳಕೆಗೆ ಕೃಷಿಕರು ಮುಂದಾಗಿದ್ದು ಸೋಮವಾರ ಆ ಯಂತ್ರಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಕೆಲ ಗ್ರಾಮಗಳಲ್ಲಿ ದಿನವೊಂದಕ್ಕೆ 500 ರೂ.ಗೆ ಬಾಡಿಗೆಗೆ ಯಂತ್ರ ಕೊಡುತ್ತಿದ್ದು ಸೋಮವಾರ ಅವರಿಗೆ ಬಿಡುವು ಇಲ್ಲದಷ್ಟು ಕರೆ ಬಂದಿದೆ. ಇನ್ನೊಂದೆಡೆ ಸುಣ್ಣ, ಮೈಲು ತುತ್ತು ಔಷಧಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂತು ಎಂದು ಅಂಗಡಿಯೊಂದರ ಮಾಲಕ ವಿವೇಕ್‌.

 

Continue Reading
Click to comment

Leave a Reply

Your email address will not be published. Required fields are marked *

Advertisement