Connect with us

ಇತರ

ಪುತ್ತೂರು ನಗರಸಭಾ ರಸ್ತೆ ದುರಸ್ತಿ ವಿಚಾರ ಶಾಸಕರ ಹಿತೈಷಿ, ಬಿಜೆಪಿ ಮುಖಂಡ ಸುಂದರ ಪೂಜಾರಿಯವರಿಂದ ಗಂಭೀರ ಆರೋಪ

Published

on

ಪುತ್ತೂರು: ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗುಂಡಿಗಳ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ತೀವ್ರಗೊಂಡಿದೆ. ನಗರಸಭೆಯ ಬಿಜೆಪಿ ಆಡಳಿತ ಮಂಡಳಿ 11.3 ಲಕ್ಷ ರೂ. ವೆಚ್ಚದಲ್ಲಿ ಡಾಂಬರು ಪ್ಯಾಚ್ ವರ್ಕ್‌ಗೆ ಅನುಮೋದನೆ ನೀಡಿ ಇ-ಟೆಂಡರ್ ಕರೆದಿದ್ದರೂ, ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡುವಂತೆ ಪೌರಾಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾನೂನು ಪ್ರಕಾರ ಇಂತಹ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ನೀಡಬೇಕು. ತಮಗೆ ಬೇಕಾದವರಿಗೆ ಕಾಮಗಾರಿ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಿಂದ ಶಾಸಕರಿಗೆ ಕಾನೂನಿನ ಅರಿವು ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಇದು ಶಾಸಕರ ಸ್ವಂತ ಹಣದಿಂದ ಮಾಡುವ ಕೆಲಸವೇ?” ಎಂದು ಪ್ರಶ್ನಿಸಿದರು.

2000 ಕೋಟಿ ಅನುದಾನದ ಪ್ರಶ್ನೆ

ಶಾಸಕರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೂಜಾರಿ, “ರಾಜ್ಯ ಸರ್ಕಾರದಿಂದ 2000 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಹೇಳಿಕೊಂಡಿರುವ ಶಾಸಕರು, ಆ ಹಣದಲ್ಲಿ ಪುತ್ತೂರಿನ ರಸ್ತೆಗಳ ದುರಸ್ತಿ ಮಾಡಬೇಕಿತ್ತು. ಅಥವಾ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ರೂಪಿಸಬಹುದಿತ್ತು. ಅದರಿಂದ ಪ್ರತಿವರ್ಷ ಡಾಂಬರು ಹಾಕುವ ಅಗತ್ಯ ತಪ್ಪಿ, ಲಕ್ಷಾಂತರ ರೂಪಾಯಿ ಉಳಿಯುತ್ತಿತ್ತು” ಎಂದು ಟೀಕಿಸಿದರು. “ಯಾವುದೇ ಕಾಮಗಾರಿ ನಡೆದರೂ ಅದನ್ನು ನಾನೇ ಮಾಡಿಸಿದ್ದು ಎಂದು ಪೋಸ್ ಕೊಡುವುದು ಶಾಸಕರ ಚಾಳಿಯಾಗಿದೆ. ಪ್ರಚಾರ ಪಡೆಯುವುದೇ ಅವರ ಉದ್ದೇಶ” ಎಂದು ಅವರು ವ್ಯಂಗ್ಯವಾಡಿದರು. ಹಿಂದಿನ ಪ್ರಾಮಾಣಿಕ ಪೌರಾಯುಕ್ತ ಮಧು ಮನೋಹರ್ ಅವರನ್ನು ವರ್ಗಾಯಿಸಿ ಈಗಿನ ಕಮಿಷನರ್‌ರನ್ನು ಶಾಸಕರೇ ತಂದರು. ಈಗ ಅದೇ ಕಮಿಷನರ್‌ರನ್ನು ಫೋನ್ ಮಾಡಿ ಬೈಯುವುದು ಯಾಕೆ? ಇದು ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕವೇ?” ಎಂದು ಪೂಜಾರಿ ಪ್ರಶ್ನಿಸಿದರು.

ಟೆಂಡರ್ ಮುಂಚೆಯೇ ಕಾಮಗಾರಿ?
ಶಾಸಕರ ಅವಧಿಯಲ್ಲಿ 2000 ಕೋಟಿ ರೂ. ಬಿಡಿ, ಒಂದು ಚಿಕ್ಕಾಸು ಅನುದಾನವೂ ಬಂದಿಲ್ಲ. ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ಟೆಂಡರ್ ಇನ್ನೂ ಓಪನ್ ಆಗದೇ ಇದ್ದರೂ ಕಾಮಗಾರಿ ಆರಂಭಿಸಿರುವುದು ದೊಡ್ಡ ಅಪರಾಧ. ಟೆಂಡರ್ ಬೇರೆಯವರಿಗೆ ಬಂದರೆ ಏನು ಮಾಡುತ್ತೀರಿ?” ಎಂದು ಅವರು ಸವಾಲು ಹಾಕಿದರು. ನಗರಸಭೆಯ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಹೊರತು ನೀವು ಅಲ್ಲ. ಜಿಲ್ಲಾಧಿಕಾರಿ ಪ್ರಾಮಾಣಿಕ IAS ಅಧಿಕಾರಿ. ಕಣ್ಣು ಮುಚ್ಚಿ ಬಿಲ್ ನೀಡುತ್ತಾರೆ ಎಂದು ಭಾವಿಸಿದ್ದೀರಾ?” ಎಂದು ಪೂಜಾರಿ ಕಟುವಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಧರ ನಾಯಕ್ ಹಾಗೂ ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement