Connect with us

ಇತರ

ರಾಜ್ಯದಲ್ಲಿ ಅಡಿಕೆಗೆ ಎಲೆಚುಕ್ಕೆ-ಹಳದಿ ರೋಗ, ಪರಿಹಾರ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂದ್ರು?

Published

on

ಶಿವಮೊಗ್ಗ: ರಾಜ್ಯದ ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ‘ಎಲೆಚುಕ್ಕಿ ಹಾಗೂ ಹಳದಿ ರೋಗ”ವು ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಇದಕ್ಕೆ ಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ರೋಗಗಳನ್ನು ನಿಯಂತ್ರಿಸುವ ವಿಧಾನಗಳು, ರೈತರಿಗೆ ಜಾಗೃತಿ ಹಾಗೂ ಬೆಳೆ ವಿಮೆ ಕುರಿತು ಚರ್ಚಿಸಿದರು. ರೋಗ ನಿಯಂತ್ರಣಕ್ಕೆ ಒಂದಷ್ಟು ನಿಯಮ ಅನುಸರಿಸುವಂತೆ ತಿಳಿಸಿದರು. ತೋಟಗಾರಿಕೆ ಬೆಳೆಗಾರರಿಗೆ ಧೈರ್ಯ ನೀಡಿದರು.

ರಾಜ್ಯದ ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ “ಎಲೆಚುಕ್ಕಿ ಹಾಗೂ ಹಳದಿ ರೋಗ” ವನ್ನು ತಡೆಗಟ್ಟಲು ಕೇವಲ ಔಷಧ ಸಿಂಪಡಣೆ ಮಾತ್ರವಲ್ಲದೇ ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ರೋಗಗಳನ್ನು ನಿಯಂತ್ರಿಸುವ ವಿಧಾನಗಳ ಕುರಿತು ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದಾಗ ಈ ಕೆಳಗಿನ ಕ್ರಮಗಳನ್ನು ಕೃಷಿಕರು ಕೈಗೊಂಡರೆ ರೋಗವನ್ನು ತಡೆಯಬಹುದಾಗಿದೆ ಎಂದು ಸಚಿವರು ರೈತರಿಗೆ ತಿಳಿಸಿದರು.

 

ಅಡಿಕೆ ಬೆಳೆಗೆ ಎದುರಾದ ಈ ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗಕ್ಕೆ ಯಾವುದೇ ಔಷಧ ಸಿಂಪಡಿಸುವಾಗ ಅದರ ಜೊತೆಗೆ ಕಡ್ಡಾಯವಾಗಿ ಅಂಟು ದ್ರಾವಣವನ್ನು ಸೇರಿಸಬೇಕು. ಜೊತೆಗೆ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಬೆಳೆ ವಿಮೆ ವಿತರಣೆ ಕುರಿತಂತೆ ಹಲವು ವಿಷಯಗಳು ಚರ್ಚಿಸಿದ ಸಚಿವರು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ಸಚಿವರು ಹೇಳಿದ ರೋಗ ತಡೆಯು ಕ್ರಮಗಳು * ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮರಗಳಿಗೆ ಸರಿಯಾದ ಪೋಷಕಾಂಶವುಳ್ಳ ಆಹಾರ ನೀಡುವುದು. * ರೋಗವನ್ನು ತಡೆಗಟ್ಟಲು ಪೊಟ್ಯಾಷ್ ಗೊಬ್ಬರ ಅತೀ ಮುಖ್ಯ. ಪ್ರತಿ ಮರಕ್ಕೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೊಟ್ಯಾಷ್ ನೀಡುವುದರಿಂದ ಮರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಎಲೆಚುಕ್ಕಿ ರೋಗದ ಕಣಗಳು ಗಾಳಿಯಲ್ಲಿ ಹರಡುವುದರಿಂದ ತೋಟದಲ್ಲಿ ಸಿಂಪಡಣೆ ಮಾಡುವಾಗ ಅಕ್ಕಪಕ್ಕದ ತೋಟದ ರೈತರೂ ಕೂಡ ಒಟ್ಟಾಗಿ ಸಿಂಪಡಣೆ ಮಾಡಿದರೆ ರೋಗ ಹರಡುವುದನ್ನು ಸಮರ್ಥವಾಗಿ ತಡೆಯಬಹುದು.

* ಎಲೆಚುಕ್ಕಿ ರೋಗಕ್ಕೆ ಗೊಬ್ಬರ ಹಾಕುವಾಗ ವಿಶೇಷವಾಗಿ ಪೊಟ್ಯಾಷ್ ಮತ್ತು ಮ್ಯಾಗ್ನೇಷಿಯಂ ಸಲ್ಫೇಟ್ ಅನ್ನು ಒಂದೇ ಬಾರಿ ನೀಡದೇ, ಕನಿಷ್ಠ 15-20 ದಿನಗಳ ಅಂತರ ಕಾಯ್ದುಕೊಳ್ಳಬೇಕು.

* ತೋಟದಲ್ಲಿ ಅತಿಯಾದ ನೆರಳಿದ್ದರೆ ಅಥವಾ ಅಂತರ ಬೆಳೆಗಳು ದಟ್ಟವಾಗಿದ್ದರೆ, ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ಸೂರ್ಯನ ಬೆಳಕು ಮತ್ತು ಗಾಳಿ ಮರಗಳ ನಡುವೆ ಆಡುವಂತೆ ಮಾಡಬೇಕು. ತೇವಾಂಶ ಹೆಚ್ಚಾದಷ್ಟೂ ರೋಗದ ತೀವ್ರತೆ ಹೆಚ್ಚುತ್ತದೆ

* ಮಣ್ಣಿನ ಹುಳಿ ಅಂಶವನ್ನು (Acidity) ಕಡಿಮೆ ಮಾಡಲು ಪ್ರತಿ ಮರಕ್ಕೆ 250-500 ಗ್ರಾಂ ನಷ್ಟು ಕೃಷಿ ಸುಣ್ಣ ಅಥವಾ ಡೋಲೋಮೈಟ್ ನೀಡಬೇಕು.

* ಮ್ಯಾಗ್ನೇಷಿಯಂ ಸಲ್ಫೇಟ್, ಬೋರಾನ್ ಮತ್ತು ಸತುವಿನ (Zinc) ಕೊರತೆ ಉಂಟಾಗದಂತೆ ನೋಡಿಕೊಂಡರೆ ಎಲೆಗಳು ಹಸಿರಾಗಿರಲು ಮತ್ತು ಗಟ್ಟಿಯಾಗಿರಲು ಸಹಕಾರಿಯಾಗಲಿದೆ.

* ಮಲೆನಾಡಿನ ಅತಿಯಾದ ಮಳೆಯಿಂದಾಗಿ ತೋಟದಲ್ಲಿ ನೀರು ನಿಲ್ಲಬಾರದು. ನೀರು ಸರಾಗವಾಗಿ ಹರಿದು ಹೋಗಲು ಬಸಿಗಾಲುವೆಗಳನ್ನು (Drainage channels) ಸರಿಯಾಗಿ ನಿರ್ವಹಿಸುವುದು.

* ಶೇ.1ರಷ್ಟು ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳಿಗೆ ಮಾತ್ರವಲ್ಲದೆ, ಪೀಡಿತ ಸೋಗೆಗಳಿಗೂ (ಎಲೆಗಳಿಗೂ) ಸಿಂಪಡಿಸುವುದು.

* ರೋಗ ತೀವ್ರವಾಗಿದ್ದರೆ ‘ಹೆಕ್ಸಾಕೋನಾಜೋಲ್’ ಅಥವಾ ‘ಪ್ರೊಪಿಕೋನಾಜೋಲ್’ ನಂತಹ ಶಿಲೀಂಧ್ರನಾಶಕಗಳನ್ನು (1 ಲೀಟರ್ ನೀರಿಗೆ 1 ಮಿ.ಲೀ) ಬೆರೆಸಿ ಸಿಂಪಡಿಸುವಂತೆ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement