Connect with us

ಇತರ

ಪುತ್ತೂರು ಕ್ಷೇತ್ರಕ್ಕೆ 3 ವರ್ಷದಲ್ಲಿ ₹ 2,259.65 ಕೋಟಿ: ಶಾಸಕ ಅಶೋಕ್‌ ರೈ

Published

on

ನಾನು ಶಾಸಕನಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2023-24ನೇ ಸಾಲಿನಲ್ಲಿ ₹ 1,479.59 ಕೋಟಿ, 24-25ರಲ್ಲಿ ₹ 529 ಕೋಟಿ, 25-26ನೇ ಸಾಲಿನಲ್ಲಿ ಇದುವರೆಗೆ ₹ 251.06 ಕೋಟಿ ಅನುದಾನವೂ ಸೇರಿ ಒಟ್ಟು ₹ 2,259.56 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಅಶೋಕ್‌ ರೈ ಹೇಳಿದರು.

ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ₹ 50 ಕೋಟಿಯಲ್ಲಿ 550 ರಸ್ತೆ ಕಾಮಗಾರಿ, ₹ 8 ಕೋಟಿಯಲ್ಲಿ 79 ಶ್ರದ್ಧಾಕೇಂದ್ರಗಳ ಅಭಿವೃದ್ಧಿ ಸೇರಿದಂತೆ ಒಟ್ಟು 629 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಈ ಕಾಮಗಾರಿಗಳ ನಿರ್ವಹಣೆಗೆ 5 ಗುತ್ತಿಗೆದಾರರಿಗೆ ತಲಾ ₹ 10 ಕೋಟಿಯಂತೆ ವಿಭಾಗಿಸಿ ನೀಡಲಾಗಿದೆ. ಈಗಾಗಲೇ ಶೇ 13 ಅನುದಾನ ಮಂಜೂರುಗೊಂಡಿದೆ. ಮುಂದಿನ 20 ದಿನಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಮೆಡಿಕಲ್ ಕಾಲೇಜಿಗೆ ಸಂಬಂಧಿಸಿ 400 ಬೆಡ್ ಆಸ್ಪತ್ರೆ ಕಾಮಗಾರಿಗೆ ₹ 450 ಕೋಟಿಯ ಅಂದಾಜುವೆಚ್ಚ ಶೀಘ್ರದಲ್ಲಿ ಮಂಜೂರುಗೊಳ್ಳಲಿದೆ. ಇದನ್ನು ಸೇರಿಸಿದರೆ ಒಟ್ಟು ₹ 2709.65 ಕೋಟಿ ಅನುದಾನ ಕಳೆದ 3 ವರ್ಷಗಳಲ್ಲಿ ಪುತ್ತೂರು ಕ್ಷೇತ್ರಕ್ಕೆ ಲಭಿಸಿದಂತಾಗುತ್ತದೆ ಎಂದರು.

ಉಪ್ಪಿನಂಗಡಿ-ಪುತ್ತೂರು ರಸ್ತೆಯ ಚತುಷ್ಪಥ ಪೂರ್ಣಗೊಳ್ಳಲು ₹ 12 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಕೃಷ್ಣನಗರದಿಂದ ಉಪ್ಪಿನಂಗಡಿವರೆಗೆ ಚತುಷ್ಪಥ ರಸ್ತೆಯ ಡಿವೈಡರ್‌ನಲ್ಲಿ ವಿದ್ಯುತ್ ಲೈಟ್ ಅಳವಡಿಕೆಗಾಗಿ ₹ 5 ಕೋಟಿ ಮಂಜೂರಾಗಿದೆ. ಬೆಟ್ಟಂಪಾಡಿ- ಪಾಣಾಜೆ ರಸ್ತೆಯ ಅಭಿವೃದ್ಧಿಗಾಗಿ ಸಿಎಸ್‌ಆರ್ ಅನುದಾನದಲ್ಲಿ ₹ 3 ಕೋಟಿ ಸೇರಿದಂತೆ ಒಟ್ಟು ₹ 6 ಕೋಟಿ ಅನುದಾನ ಲಭಿಸಿದೆ. ಕಬಕ-ವಿಟ್ಲದ ಚತುಷ್ಪಥ ರಸ್ತೆಗಾಗಿ ₹ 60 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ₹ 10 ಕೋಟಿ ಅನುದಾನ ದೊರೆತಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 38 ಕಿ.ಮೀ ರಸ್ತೆಯ ಅಭಿವೃದ್ಧಿಗಾಗಿ ಸಲ್ಲಿಸಲಾದ ₹ 38 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದೆ ಎಂದರು.

ಹಾರಾಡಿ ರೈಲ್ವೆ ಅಂಡರ್ ಪಾಸ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುವ ಸಂಬಂಧ ರಾಜ್ಯ ಸರ್ಕಾರದ ವತಿಯಿಂದ ಕಾಮಗಾರಿ ನಡೆಯಲಿದ್ದು, ಅದಕ್ಕಾಗಿ ₹ 8 ಕೋಟಿ ಅನುದಾನ ಮಂಜೂರಾಗಿದ್ದು, ರೈಲ್ವೆ ಇಲಾಖೆ ಮೇಲ್ವಿಚಾರಣೆಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ನಡೆಸಲಿದೆ ಎಂದು ಅವರು ತಿಳಿಸಿದರು.

ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗಾಗಿ ಕಳೆದ ವರ್ಷ ₹ 3 ಕೋಟಿ ಹಾಗೂ ಈ ವರ್ಷ ₹ 8 ಕೋಟಿ, ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ₹ 9 ಕೋಟಿ ಹಾಗೂ ಜೈನಧರ್ಮದ ಶ್ರದ್ಧಾ ಕೇಂದ್ರಗಳಿಗೆ ₹ 2 ಕೋಟಿ ಅನುದಾನ ಮಂಜೂರುಗೊಂಡಿದೆ. ಈ ಹಿಂದೆ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿತ್ತು. ಅದಕ್ಕಾಗಿ 9 ಸೆಂಟ್ಸ್ ಜಾಗವನ್ನು ಗುರುತಿಸಿ ಮಹಿಳಾ ಠಾಣೆಯ ಹೆಸರಲ್ಲಿ ಪಹಣಿ ಮಾಡಲಾಗಿತ್ತು. ಆದರೆ, ಈ ಮಹಿಳಾ ಠಾಣೆಯನ್ನು ಎ ಗ್ರೇಡ್ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಹೆಚ್ಚುವರಿ ಜಾಗದ ಅವಶ್ಯಕತೆಯ ಸಂಬಂಧ ಕೊಂಬೆಟ್ಟಿನಲ್ಲಿ 30 ಸೆಂಟ್ಸ್ ಸ್ಥಳವನ್ನು ಗುರುತಿಸಲಾಗಿದೆ ಎಂದರು.

ಪುತ್ತೂರಿನಲ್ಲಿ ಕೇಂದ್ರ ಗುಪ್ತಚರ ಇಲಾಖೆ ಕಚೇರಿಯನ್ನು ತೆರೆಯಲು ಈ ಹಿಂದೆ ಸಲ್ಲಿಸಲಾದ ಪ್ರಸ್ತಾವನೆಯಂತೆ ಇದೀಗ ಸಹಾಯಕ ಗುಪ್ತಚರ ಇಲಾಖೆಯ ಕಚೇರಿಯನ್ನು ತೆರೆಯಲು ಸರ್ಕಾರ ಮುಂದಾಗಿದೆ. ಇಲಾಖಾ ಕಚೇರಿ ಹಾಗೂ ವಸತಿ ಸಂಕೀರ್ಣಕ್ಕೆ ಪಡ್ನೂರಿನಲ್ಲಿ 44 ಸೆಂಟ್ಸ್ ಮಂಜೂರುಗೊಳಿಸಲಾಗಿದೆ. ಕುರಿಯ ಗ್ರಾಮದಲ್ಲಿ ಕಾರ್ಮಿಕ ವಸತಿ ಶಾಲೆಯ ನಿರ್ಮಾಣಕ್ಕಾಗಿ 7 ಎಕರೆ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜ.31ರಂದು ಪುತ್ತೂರಿನ ಬನ್ನೂರಿನ ಆನೆಮಜಲು ಎಂಬಲ್ಲಿ ನಿರ್ಮಿಸಲಾದ ನ್ಯಾಯಾಲಯ ಸಂಕೀರ್ಣವನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.31ರಂದು ಲೋಕಾರ್ಪಣೆ ಮಾಡುವರು. ರಾಜ್ಯಪಾಲ, ಗೃಹ ಸಚಿವ, ಲೋಕೋಪಯೋಗಿ ಸಚಿವ, ಉಸ್ತುವಾರಿ ಸಚಿವ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಭಾಗವಹಿಸುವರು ಎಂದರು.

Continue Reading
Click to comment

Leave a Reply

Your email address will not be published. Required fields are marked *

Advertisement