Published
3 months agoon
By
Akkare News
ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಿಕಸಿತ ಭಾರತ’, ‘ಕರ್ತವ್ಯ’ ಎಂಬ ಘೋಷವಾಕ್ಯಗಳಿಗೆ ಈ ಬಜೆಟ್ ಹೆಚ್ಚಿನ ಒತ್ತು ನೀಡಿದ್ದರೂ, ಜಾರಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆ ಹಾಗೂ ಹೊಣೆಗಾರಿಕೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.

ಈ ಬಜೆಟ್ ಉದ್ದೇಶಗಳಲ್ಲಿ ಶ್ರೀಮಂತವಾಗಿದ್ದರೂ, ಹಣಕಾಸಿನ ಬದ್ಧತೆಯಲ್ಲಿ ದುರ್ಬಲವಾಗಿದೆ. ದೃಷ್ಟಿಕೋನವನ್ನು ಘೋಷಿಸಿ, ಜಾರಿಗೆ ಮುಂದೂಡುವ ಪ್ರವೃತ್ತಿ ಇದರಲ್ಲಿ ಸ್ಪಷ್ಟವಾಗಿದೆ. ‘ಎನೇಬಲ್, ಎನ್ಕರೇಜ್, ಸಪೋರ್ಟ್’ ಎಂಬ ಅಸ್ಪಷ್ಟ ಪದಗಳನ್ನೇ ಅವಲಂಬಿಸಿರುವ ಈ ದಾಖಲೆ ಜವಾಬ್ದಾರಿಯ ಬಜೆಟ್ ಅಲ್ಲ, ವಾಕ್ಚಾತುರ್ಯದ ಬಜೆಟ್ ಎಂದು ಸಿಎಂ ಹೇಳಿದರು.

ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ನ್ಯಾಯಸಮ್ಮತ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಗಳ ಹೊಣೆಗಾರಿಕೆಗಳು ಹೆಚ್ಚುತ್ತಿರುವುದರ ನಡುವೆಯೂ ಕೇಂದ್ರ-ರಾಜ್ಯ ತೆರಿಗೆ ಹಂಚಿಕೆ ಶೇ.41ರಲ್ಲೇ ನಿಲ್ಲಿಸಲಾಗಿದೆ. ಹಂಚಿಕೆಗೇ ಸೇರದ ಸೆಸ್ ಮತ್ತು ಸರ್ಚಾರ್ಜ್ಗಳ ಮೂಲಕ ಕೇಂದ್ರ ಸರ್ಕಾರ ಆದಾಯವನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಕೇಂದ್ರ ಪ್ರಾಯೋಜಿತ ಯೋಜನೆಗಳ ವೆಚ್ಚವನ್ನು ಕ್ರಮೇಣ ರಾಜ್ಯಗಳ ಮೇಲೆ ಹೊರಿಸುತ್ತಿರುವುದು ಅನ್ಯಾಯಕರ ಎಂದು ಹೇಳಿದರು. ಜಿಎಸ್ಟಿ ಸಂಬಂಧಿತ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೈಗೊಳ್ಳುತ್ತಿರುವುದರಿಂದ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಪಾಲು ಕನಿಷ್ಠ ಶೇ.50ಕ್ಕೆ ಹೆಚ್ಚಳವಾಗಬೇಕೆಂಬ ನಿರೀಕ್ಷೆ ಈ ಬಜೆಟ್ನಲ್ಲಿ ನಿರಾಶೆಯಾಗಿ ಉಳಿದಿದೆ ಎಂದರು.

16ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ನಷ್ಟ 16ನೇ ಹಣಕಾಸು ಆಯೋಗದ ಶಿಫಾರಸ್ಸು ಕರ್ನಾಟಕಕ್ಕೆ ತೀವ್ರ ನಿರಾಸೆ ತಂದಿದೆ. 14ನೇ ಹಣಕಾಸು ಆಯೋಗದಲ್ಲಿ ಶೇ.4.71ರಷ್ಟಿದ್ದ ಕರ್ನಾಟಕದ ತೆರಿಗೆ ಪಾಲು ಇದೀಗ ಶೇ.4.131ಕ್ಕೆ ಇಳಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ವರ್ಷಕ್ಕೆ ಸುಮಾರು ₹10,000-15,000 ಕೋಟಿ ನಷ್ಟವಾಗುತ್ತಿದ್ದು, ಕಲ್ಯಾಣ ಯೋಜನೆಗಳು, ಮೂಲಸೌಕರ್ಯ, ನೀರಾವರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು. ರಾಷ್ಟ್ರೀಯ ಬೆಳವಣಿಗೆಗೆ ಕರ್ನಾಟಕ ನೀಡುತ್ತಿರುವ ಮಹತ್ವದ ಕೊಡುಗೆಗೆ ತಕ್ಕ ಪ್ರತಿಫಲ ಈ ಬಜೆಟ್ನಲ್ಲಿ ಸಿಗಲಿಲ್ಲ ಎಂದರು.






