Published
3 weeks agoon
By
Akkare News
ಪುತ್ತೂರು : ದಾರಿಯಲ್ಲಿ ಸಾಗುವಾಗ ಕೆದಂಬಾಡಿಯ ಸನ್ಯಾಸಿಗುಡ್ಡೆ ಜನತಾ ಕಾಲೋನಿಯ ಬಳಿ ಕಂಡ ಆ ದೃಶ್ಯ ಎಂತವರನ್ನೂ ಒಂದು ಕ್ಷಣ ಯೋಚಿಸುವಂತೆ ಮಾಡುತ್ತದೆ. ಅಲ್ಲಿ ರಾರಾಜಿಸುತ್ತಿರುವುದು ಯಾವುದೋ ಹಬ್ಬದ ಶುಭಾಶಯದ ಬ್ಯಾನರ್ ಅಲ್ಲ, ಬದಲಾಗಿ ‘ಚುನಾವಣಾ ಬಹಿಷ್ಕಾರ’ ಎಂಬ ಆಕ್ರೋಶದ ನರಕಯಾತನೆಯ ಕೂಗು!
ಭರವಸೆಗಳ ಸಂತೆ, ಕೆಲಸ ಮಾತ್ರ ಶೂನ್ಯ!


ಆ ಬ್ಯಾನರ್ನಲ್ಲಿರುವ ಸಾಲುಗಳನ್ನು ಓದಿದರೆ ಅಲ್ಲಿನ ಜನರ ನೋವು ಅರ್ಥವಾಗುತ್ತದೆ. ರಸ್ತೆ ಇಲ್ಲ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ತಡೆಗೋಡೆಯೂ ಇಲ್ಲ. ಮಳೆಗಾಲ ಬಂದರೆ ಆ ಜನರ ಬದುಕು ಅಯೋಮಯ. ಚುನಾವಣೆ ಬಂದಾಗ ಕೈಮುಗಿದು ಬರುವ ನಾಯಕರು, ಗೆದ್ದ ಮೇಲೆ ಆ ಕಡೆ ಮುಖ ಹಾಕುವುದಿಲ್ಲ ಎನ್ನುವುದಕ್ಕೆ ಈ ಬ್ಯಾನರ್ ಸಾಕ್ಷಿ. “ಬರೀ ಭರವಸೆ ಸಾಕು, ನಮಗೆ ಕೆಲಸ ಬೇಕು” ಎನ್ನುತ್ತಿರುವ ಜನರ ಈ ನಡೆ ಪ್ರಜಾಪ್ರಭುತ್ವಕ್ಕೆ ಒಳಿತಲ್ಲ.

ಶಾಸಕರ ವರ್ಚಸ್ಸಿಗೆ ಸ್ಥಳೀಯ ನಾಯಕರೇ ಕುತ್ತು?
ಪುತ್ತೂರಿನ ಶಾಸಕರು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡುತ್ತಿರಬಹುದು. ಆದರೆ, ಅವರ ಕೈ ಕೆಳಗಿರುವ ಸ್ಥಳೀಯ ಪದಾಧಿಕಾರಿಗಳು ಮತ್ತು ಬ್ಲಾಕ್ ಮಟ್ಟದ ನಾಯಕರು ಏನು ಮಾಡುತ್ತಿದ್ದಾರೆ?
ಶಾಸಕರ ಗಮನಕ್ಕೆ ಈ ಹಳ್ಳಿಯ ಸಮಸ್ಯೆ ತಲುಪಿದೆಯೇ?
ಸ್ಥಳೀಯ ನಾಯಕರು ಜನರ ಅಳಲನ್ನು ಕೇಳಿಸಿಕೊಳ್ಳುವಲ್ಲಿ ಸೋತಿದ್ದಾರೆಯೇ?
ಒಂದು ಪುಟ್ಟ ಗ್ರಾಮದಲ್ಲಿ ಇಂತಹ ಬ್ಯಾನರ್ ಬೀಳುತ್ತಿದೆ ಎಂದರೆ, ಅದು ಸ್ಥಳೀಯ ನಾಯಕತ್ವದ ಸಂಪೂರ್ಣ ವೈಫಲ್ಯ.
ಈಗಲಾದರೂ ಎಚ್ಚೆತ್ತುಕೊಳ್ಳಿ!
ದಾರಿಯಲ್ಲಿ ಹೋಗುವಾಗ ಜನರು ಈ ಬ್ಯಾನರ್ ನೋಡಿ ನಾಯಕರಿಗೆ ಶಾಪ ಹಾಕುತ್ತಿದ್ದಾರೆ. ಇದು ಕೇವಲ ಒಂದು ಹಳ್ಳಿಯ ಸಮಸ್ಯೆಯಲ್ಲ, ಇದು ಆಡಳಿತದ ಇಮೇಜ್ ಮೇಲೆ ಬೀರುವ ದೊಡ್ಡ ಹೊಡೆತ. ವಿರೋಧ ಪಕ್ಷದವರಿಗೆ ಇದು ಅಸ್ತ್ರವಾಗುವ ಮೊದಲು, ಸ್ಥಳೀಯ ನಾಯಕರು ಎಸಿ ರೂಮಿನಿಂದ ಹೊರಬಂದು ಆ ಕಾಲೋನಿಯ ಜನರ ಜೊತೆ ಕುಳಿತು ಮಾತನಾಡಬೇಕು.
ಸನ್ಯಾಸಿಗುಡ್ಡೆ ಜನರ ಬೇಡಿಕೆಗಳೇನು ಅತೀ ದೊಡ್ಡವಲ್ಲ; ಅವರಿಗೆ ಬೇಕಿರುವುದು ಮನುಷ್ಯರಂತೆ ಬದುಕಲು ಬೇಕಾದ ಕನಿಷ್ಠ ಸೌಕರ್ಯಗಳು.
ರಸ್ತೆಯಲ್ಲಿ ಹೋಗುವಾಗ ಕಂಡ ಈ ಬ್ಯಾನರ್ ನಾಳೆ ಪ್ರತಿಯೊಂದು ಹಳ್ಳಿಯಲ್ಲೂ ಕಾಣಿಸಿಕೊಳ್ಳಬಾರದು ಎಂದರೆ, ಜನಪ್ರತಿನಿಧಿಗಳು ಇಂದೇ ಕಾರ್ಯಪ್ರವೃತ್ತರಾಗಬೇಕು. ಜನರ ವಿಶ್ವಾಸ ಕಳೆದುಕೊಂಡ ಮೇಲೆ ಕೋಟಿಗಳ ಅನುದಾನ ಬಂದರೂ ಪ್ರಯೋಜನವಿಲ್ಲ. ಶಾಸಕರು ಭೇಟಿ ನೀಡಿ ಜನರ ಸ್ಪಂದನೆಗೆ ಸ್ಪಂದಿಸುವ ಅಗತ್ಯವಿದೆ.






