Published
12 hours agoon
By
Akkare News
“ವಿದ್ಯಾರ್ಥಿಗಳಲ್ಲಿ ಕಲಿಕಾ ಪ್ರಕ್ರಿಯೆ ಎನ್ನುವುದು ಬಹುಮುಖಿ ಆಯಾಮವನ್ನು ಅಪೇಕ್ಷಿಸುತ್ತದೆ. ಯುವ ಸಂಸತ್ ಸ್ಪರ್ಧೆ ಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕವಾದ ಉತ್ತಮ ಮಾದರಿಯನ್ನು ನೀಡುವ ಮೂಲಕ ಅವರಲ್ಲಿ ಜ್ಞಾನವು ಗಟ್ಟಿಯಾಗಿ ಬೇರೂರಲು ಪೂರಕವಾಗುತ್ತವೆ. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಗಳಿಸಿಕೊಂಡ ಅನುಭವಗಳು ಅವರ ಮುಂದಿನ ಬದುಕಿಗೆ ಮಾರ್ಗದರ್ಶಿಯಾಗಿ ನಿಲ್ಲುತ್ತವೆ” ಎಂದು ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ನುಡಿದರು.
ಅವರು ದಿನಾಂಕ 01-10-2026 ಗುರುವಾರದಂದು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. “ಯುವ ಸಂಸತ್ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಸದೃಢವಾಗಿ ಬೆಳೆಯಲಿ. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣವು ಸಾಕಾರಗೊಳ್ಳಲಿ” ಎಂದು ಅವರು ನುಡಿದರು. ಯುವ ಸಂಸತ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ರಾವ್ ಪಿ. ಇವರು ವಹಿಸಿದ್ದರು. ವೇದಿಕೆಯಲ್ಲಿ ಯುವ ಸಂಸತ್ ಸ್ಪರ್ಧೆಯ ತಾಲೂಕ್ ನೋಡಲ್ ಅಧಿಕಾರಿ ಹರಿಪ್ರಸಾದ್, ಪುತ್ತೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಬ್ರಹಾಂ, ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಉಪಪ್ರಾಂಶುಪಾಲರಾದ ನಾಗರಾಜ ಭಟ್ ಪಿ. ಇವರು ಅತಿಥಿಗಳನ್ನು ಸ್ವಾಗತಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಉಪನ್ಯಾಸಕರುಗಳಾದ ಅಬ್ದುಲ್ ರಜಾಕ್, ಪದ್ಮನಾಭ ಎಸ್. ಹಾಗೂ ನಿವೃತ್ತ ಅಧ್ಯಾಪಕರಾದ ಗುಡ್ಡಪ್ಪ ಬಲ್ಯ ಇವರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯುಜಿನಾ ಪಿ. ವಂದಿಸಿದರು. ಸಹ ಶಿಕ್ಷಕರಾದ ಮಮತಾ ರೈ, ಅಮಿತಾ, ರೆನಿಟಾ ಸುಷ್ಮಾ, ಮೋಹಿನಿ ಬಿ.ಟಿ., ಗ್ರೆಗೊರಿ ರೋನಿ ಪಾಯ್ಸ್, ಜಗನ್ನಾಥ ಪಿ. ಅಥಿತಿಗಳನ್ನು ಹೂ ನೀಡಿ ಗೌರವಿಸಿದರು. 



