Published
12 hours agoon
By
Akkare Newsಮಂಗಳೂರು: ಕರಾವಳಿ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ ಹಾಗೂ ವೇದಿಕೆ ಒದಗಿಸುವ ಮಹತ್ವದ ಹೆಜ್ಜೆಯಾಗಿ, ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಹಾಗೂ ಸಂಕೀರ್ಣ ನಿರ್ಮಾಣ ಮಾಡಲು 50 ಎಕರೆ ಸರ್ಕಾರಿ ಭೂಮಿಯನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA) ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ.
ಕೆಎಸ್ಸಿಎ ಅಧ್ಯಕ್ಷರಾದ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಅಕ್ಟೋಬರ್ 1, 2026ರಂದು ಈ ಕುರಿತು ಪತ್ರ ಬರೆದಿದ್ದಾರೆ.
ಪತ್ರದಲ್ಲಿರುವ ಪ್ರಮುಖ ಅಂಶಗಳು ಹಾಗೂ ವಿವರಗಳು
50 ಎಕರೆ ಜಮೀನಿಗೆ ಮನವಿ: ಮಂಗಳೂರು ಭಾಗದಲ್ಲಿ ಕ್ರಿಕೆಟ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸುಮಾರು 50 ಎಕರೆ ಸರ್ಕಾರಿ ಭೂಮಿಯನ್ನು ನೇರ ಖರೀದಿ (Outright purchase) ಅಥವಾ 50 ವರ್ಷಗಳ ದೀರ್ಘಾವಧಿ ಗುತ್ತಿಗೆ (50 years long-lease) ಆಧಾರದ ಮೇಲೆ ಕೆಎಸ್ಸಿಎಗೆ ಮಂಜೂರು ಮಾಡುವಂತೆ ಕೋರಲಾಗಿದೆ. ಶಿಕ್ಷಣ ಮತ್ತು ಕ್ರೀಡಾ ಸಂಸ್ಥೆಗಳಿಗೆ ಸಾಮಾನ್ಯವಾಗಿ ನೀಡಲಾಗುವ ಕನಿಷ್ಠ/ರಿಯಾಯಿತಿ ದರದಲ್ಲೇ ಈ ಜಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿದೆ.

ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಬಲ: ಪ್ರಸ್ತುತ ಕರ್ನಾಟಕ ರಾಜ್ಯ ರಣಜಿ ಹಾಗೂ ಹಿರಿಯರ ಕ್ರಿಕೆಟ್ ತಂಡದಲ್ಲಿ ಶೇಕಡಾ 40ಕ್ಕೂ ಹೆಚ್ಚು ಆಟಗಾರರು ಬೆಂಗಳೂರು ಹೊರತುಪಡಿಸಿದ ಇತರ ಜಿಲ್ಲೆಗಳ (Moffusil districts) ಗ್ರಾಮೀಣ ಹಾಗೂ ಕರಾವಳಿ ಭಾಗದಿಂದಲೇ ಆಯ್ಕೆಯಾಗುತ್ತಿದ್ದಾರೆ. ಇಂತಹ ಅದ್ಭುತ ಪ್ರತಿಭೆಗಳನ್ನು ಗುರುತಿಸಿ, ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸೂಕ್ತ ತರಬೇತಿ ಮತ್ತು ವೇದಿಕೆ ಅನಿವಾರ್ಯವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿನಲ್ಲಿ ಈ ಮೂಲಸೌಕರ್ಯ ತುರ್ತಾಗಿ ಆಗಬೇಕಿದೆ ಎಂದು ಕೆಎಸ್ಸಿಎ ತಿಳಿಸಿದೆ.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣಕ್ಕೆ ಕೆಎಸ್ಸಿಎ ಮುನ್ನುಡಿ ಬರೆದಿದ್ದು, ಮೂಡಾ ವತಿಯಿಂದ ಭೂಮಿ ಗುರುತಿಸಿ ಮಂಜೂರಾದರೆ ಕರಾವಳಿಯ ಬಹುಕಾಲದ ಕನಸು ಶೀಘ್ರವೇ ನನಸಾಗಲಿದೆ.

