Published
3 hours agoon
By
Akkare News
ಇಂತಹ ಅದ್ಭುತ ಸಾಧನೆ ಮಾಡಿರುವವವರ ಒಂದು ಉದಾಹರಣೆ ಎಂದರೆ ಅದು ಮಲ್ಲಿಕಾ ಅಯ್ಯರ್. ಹೌದು, ಎರಡು ಕೈಗಳಿಲ್ಲದಿದ್ದರೂ, ತನ್ನ ತೋಳಿನ ಮೂಳೆಯಿಂದಲೇ ಇಡೀ ಪಿಎಚ್ಡಿ ಪ್ರಬಂಧವನ್ನ ಟೈಪ್ ಮಾಡಿದ ಈಕೆಯ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ.
ಒಂದು ಭೀಕರ ಅಪಘಾತದಲ್ಲಿ ತಮ್ಮ ಎರಡು ಕೈಗಳನ್ನ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದ ಇವರು ಇಂದು ಜಗತ್ತೇ ಮೆಚ್ಚುವಂತಹ ಅಂತರಾಷ್ಟ್ರೀಯ ಮಟ್ಟದ ಸಾಧಕಿಯಾಗಿ ಬೆಳೆದು ನಿಂತಿದ್ದಾರೆ. 13ನೇ ವಯಸ್ಸಿನಲ್ಲಿ ಗ್ರೆನೇಡ್ ಸ್ಫೋಟದ ಭೀಕರ ದುರಂತ ಮಲ್ಲಿಕಾ ಅಯ್ಯರ್ ಅವರ ಬಾಲ್ಯ ಎಲ್ಲ ಮಕ್ಕಳಂತೆ ಸಾಮಾನ್ಯವಾಗಿರಲಿಲ್ಲ. ಕೇವಲ 13ನೇ ವಯಸ್ಸಿನಲ್ಲಿದ್ದಾಗ ಸಂಭವಿಸಿದ ಗ್ರೆನೇಡ್ ಸ್ಫೋಟವೊಂದು ಅವರ ಬದುಕನ್ನೇ ಕತ್ತಲೆ ಮಾಡಿತು ಎಂದರೂ ತಪ್ಪಿಲ್ಲ. ಆ ಭೀಕರ ಸ್ಫೋಟದಲ್ಲಿ ಮಲ್ಲಿಕಾ ಅವರು ತಮ್ಮ ಎರಡೂ ಕೈಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು ಮತ್ತು ಅವರ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿದ್ದವು.
ಆ ಚಿಕ್ಕ ವಯಸ್ಸಿನಲ್ಲಿಯೇ ಅವರು ಸರಿಸುಮಾರು 2 ವರ್ಷಗಳ ಕಾಲ ಆಸ್ಪತ್ರೆಯ ಹಾಸಿಗೆಯಲ್ಲಿ ಕಳೆಯಬೇಕಾಯಿತು. ಹಲವಾರು ಶಸ್ತ್ರಚಿಕಿತ್ಸೆಗಳು ಹಾಗೂ ತೀವ್ರವಾದ ನೋವಿನ ನಡುವೆಯೂ ಅವರು ತಮ್ಮ ಬದುಕುವ ಛಲವನ್ನು ಮತ್ತು ಭವಿಷ್ಯದ ಕನಸುಗಳನ್ನ ಮಾತ್ರ ಎಂದಿಗೂ ಕೈಬಿಡಲಿಲ್ಲ.
ಛಲ ಬಿಡದೇ ಕಾಲೇಜು ಸೇರ್ಪಡೆ ಎರಡು ವರ್ಷಗಳ ಸುದೀರ್ಘ ಚಿಕಿತ್ಸೆಯ ನಂತರ ಮಲ್ಲಿಕಾ ಅವರು ಮತ್ತೆ ತಮ್ಮ ಶಿಕ್ಷಣದತ್ತ ಮುಖ ಮಾಡಿದರು. ಕೈಗಳಿಲ್ಲದಿದ್ದರೂ ಕೇವಲ ತಮ್ಮ ಬುದ್ಧಿಶಕ್ತಿ ಹಾಗೂ ಅಚಲವಾದ ವಿಶ್ವಾಸದಿಂದ ಹತ್ತನೇ ತರಗತಿಯಲ್ಲಿ ಬರೋಬ್ಬರಿ ಶೇ. 97ರಷ್ಟು ಅಂಕಗಳನ್ನ ಗಳಿಸುವ ಮೂಲಕ ಇಡೀ ಸಮಾಜವೇ ನಿಬ್ಬೆರಗಾಗುವಂತೆ ಮಾಡಿದರು. ಈ ಅದ್ಭುತ ಸಾಧನೆಯ ಮೂಲಕ ದೆಹಲಿಯ ಪ್ರತಿಷ್ಠಿತ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆದ ಅವರು, ದೈಹಿಕ ನ್ಯೂನತೆಯು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಜಗತ್ತಿಗೆ ಸಾಧಿಸಿ ತೋರಿಸಿದರು. 
ತೋಳಿನ ಮೂಳೆಯಲ್ಲೇ ಪಿಎಚ್ಡಿ ಪ್ರಬಂಧ ಟೈಪಿಂಗ್ ಸಾಧನೆ! ಅವರ ಜೀವನದ ಅತ್ಯಂತ ಅಚ್ಚರಿಯ ಸಾಧನೆ ಎಂದರೆ ಅವರು ತಮ್ಮ ಪಿಎಚ್ಡಿ ಅಧ್ಯಯನವನ್ನ ಪೂರ್ಣಗೊಳಿಸಿದ ರೀತಿ. ಪಿಎಚ್ಡಿ ಪ್ರಬಂಧವನ್ನ ಸಿದ್ಧಪಡಿಸುವುದು ಸಾಮಾನ್ಯರಿಗೆ ಅತ್ಯಂತ ಕಠಿಣವಾದ ಕೆಲಸ. ಆದರೆ ಕೈಗಳೇ ಇಲ್ಲದ ಮಲ್ಲಿಕಾ ಅವರು, ತಮ್ಮ ತೋಳಿನಿಂದ ಹೊರಚಾಚಿದ್ದ ಒಂದು ಸಣ್ಣ ಮೂಳೆಯನ್ನೇ ಬೆರಳಿನಂತೆ ಬಳಸಿಕೊಂಡು ಇಡೀ ಪಿಎಚ್ಡಿ ಪ್ರಬಂಧವನ್ನು ಟೈಪ್ ಮಾಡಿದರು


