Published
16 hours agoon
By
Akkare News
ಚುನಾವಣೆಯ ಬೆನ್ನಲ್ಲೇ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಸೇರಿದ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ಧ ತಮಿಳುನಾಡು ವಿಧಾನಸಭೆಯ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ (ಅಕ್ಟೋಬರ್ 13) ಎತ್ತಿಹಿಡಿದಿದೆ. 
ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು, ಶಾಸಕರ ರಾಜೀನಾಮೆಗಳು ನೈಜವಾಗಿದ್ದವು ಮತ್ತು ರಾಜೀನಾಮೆ ಪ್ರಕ್ರಿಯೆಯ ಕುರಿತು ಸ್ಪೀಕರ್ ವಿವರವಾದ ತನಿಖೆ ನಡೆಸುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಶಾಸಕರ ರಾಜೀನಾಮೆಯು ಅನರ್ಹತಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ಎರಡು ತಿಂಗಳೊಳಗೆ ಅನರ್ಹತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸ್ಪೀಕರ್ಗೆ ನಿರ್ದೇಶನ ನೀಡಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶವು 2026ರ ಮೇ 4ರಂದು ಪ್ರಕಟಗೊಂಡಿತ್ತು. ನಟ ವಿಜಯ್ ಅವರ ಟಿವಿಕೆ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಯಗಳಿಸಿತ್ತು. ಆದಾಗ್ಯೂ, ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತದ (118 ಸ್ಥಾನಗಳು) ಸಂಖ್ಯೆಗಿಂತ ಕಡಿಮೆ ಅಂದರೆ 108 ಸ್ಥಾನಗಳನ್ನು ಮಾತ್ರ ಟಿವಿಕೆ ಪಡೆದಿದ್ದರಿಂದ, ಅದು ಇತರ ರಾಜಕೀಯ ಪಕ್ಷಗಳ ಬೆಂಬಲವನ್ನು ಕೋರಿತ್ತು. ಈ ಬೆನ್ನಲ್ಲೇ ಟಿವಿಕೆ ಸರ್ಕಾರವನ್ನೂ ರಚಿಸಿತ್ತು. ನಂತರ ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ 144 ಮತಗಳನ್ನು ತನ್ನ ಪರವಾಗಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಎಐಎಡಿಎಂಕೆ ಪಕ್ಷದ ಪ್ರಕಾರ, ಚುನಾವಣಾ ಫಲಿತಾಂಶಗಳು ಘೋಷಣೆಯಾದ ತಕ್ಷಣ, ಅಂದರೆ 2026ರ ಮೇ 11ರಂದು ಪಕ್ಷವು ತನ್ನ ಸದಸ್ಯರಿಗೆ ವಿಶ್ವಾಸಮತವನ್ನು ವಿರೋಧಿಸುವಂತೆ ಸೂಚಿಸಿ ‘ವಿಪ್’ ಜಾರಿಗೊಳಿಸಿತ್ತು. ಆದರೆ, ಮೇ 13ರಂದು ನಡೆದ ವಿಶ್ವಾಸಮತದ ಸಂದರ್ಭದಲ್ಲಿ 25 ಶಾಸಕರು ಪಕ್ಷದ ವಿಪ್ಗೆ ವಿರುದ್ಧವಾಗಿ ಟಿವಿಕೆ ಪರವಾಗಿ ಮತ ಚಲಾಯಿಸಿದ್ದರು. ಶಾಸಕರು ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ, 2026ರ ಮೇ 14ರಂದು ಭಾರತದ ಸಂವಿಧಾನದ 10ನೇ ಅನುಸೂಚಿಯ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು.
ಸಂವಿಧಾನದ 190ನೇ ವಿಧಿಯ ಪ್ರಕಾರ, ರಾಜೀನಾಮೆಯನ್ನು ಸ್ವಯಂಪ್ರೇರಿತವಾಗಿ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಪೀಕರ್ ಕಡ್ಡಾಯವಾಗಿ ವಿಚಾರಣೆಯನ್ನು ನಡೆಸಬೇಕಿತ್ತು ಎಂದು ಪಕ್ಷವು ವಾದಿಸಿತ್ತು. ಮೇ 25ರಂದು ಮಧ್ಯಾಹ್ನ 2:30ರ ಸುಮಾರಿಗೆ ರಾಜೀನಾಮೆ ನೀಡಲಾಗಿತ್ತು ಮತ್ತು ಅದೇ ದಿನ ಅದನ್ನು ಅಂಗೀಕರಿಸಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದು ಅದು ಪ್ರತಿಪಾದಿಸಿತ್ತು. ಶಾಸಕರಿಗೆ ಅದೇ ದಿನ ಟಿವಿಕೆ ಪಕ್ಷದ ಸದಸ್ಯತ್ವವನ್ನು ನೀಡಲಾಗಿತ್ತು ಎಂಬ ಅಂಶವು ಸಂಭಾವ್ಯ ‘ಕುದುರೆ ವ್ಯಾಪಾರ’ದ ಕಡೆಗೆ ಬೊಟ್ಟು ಮಾಡುತ್ತದೆ ಎಂದು ಹೇಳಿತ್ತು. ಸ್ಪೀಕರ್ ಸರಿಯಾದ ವಿಚಾರಣೆಯನ್ನು ನಡೆಸಿದ್ದಿದ್ದರೆ, ನಮಗೆ ಅದನ್ನು ವಿರೋಧಿಸಲು ಅನುಕೂಲವಾಗುವಂತೆ ನೋಟಿಸ್ ನೀಡಬೇಕಿತ್ತು. ಹಾಗಾಗಿ, ಸಂವಿಧಾನದ 190ನೇ ವಿಧಿಯಲ್ಲಿನ ಕಾರ್ಯವಿಧಾನವನ್ನು ಪಾಲಿಸುವ ಪ್ರಕ್ರಿಯೆಯು ಕೇವಲ ಒಂದು ನಾಟಕವಷ್ಟೇ ಆಗಿತ್ತು ಎಂದು ಎಐಎಡಿಎಂಕೆ ಪ್ರತಿಪಾದಿಸಿತ್ತು.
ಮತ್ತೊಂದೆಡೆ, ಶಾಸನಸಭೆಯ ಸದಸ್ಯರೊಬ್ಬರ ರಾಜೀನಾಮೆಯನ್ನು ಅಂಗೀಕರಿಸಿದ ಮಾತ್ರಕ್ಕೆ, ರಾಜೀನಾಮೆಗೂ ಮುನ್ನ ಅವರು ತೋರಿದ ನಡವಳಿಕೆಗೆ ಸಂಬಂಧಿಸಿದ ಅನರ್ಹತೆಯ ಪರಿಣಾಮಗಳಿಂದ ಅವರು ಮುಕ್ತರಾಗುವುದಿಲ್ಲ ಎಂದು ಶಾಸನಸಭೆಯ ಕಾರ್ಯದರ್ಶಿ ವಾದಿಸಿದ್ದರು. ಸಂವಿಧಾನದ 10ನೇ ಅನುಸೂಚಿಯಡಿ ಸದಸ್ಯರ ವಿರುದ್ಧ ಬಾಕಿ ಇರುವ ಅನರ್ಹತಾ ಪ್ರಕ್ರಿಯೆಗಳನ್ನು ಸದಸ್ಯರ ರಾಜೀನಾಮೆ ಅಂಗೀಕಾರವು ರದ್ದುಗೊಳಿಸುತ್ತದೆ, ನಿಷ್ಫಲಗೊಳಿಸುತ್ತದೆ ಅಥವಾ ವ್ಯರ್ಥವಾಗುವಂತೆ ಮಾಡುತ್ತದೆ ಎಂಬ ಮೂಲಭೂತವಾಗಿ ತಪ್ಪಾದ ಕಾನೂನು ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯನ್ನು ಆಧರಿಸಿದೆ ಎಂದು ಹೇಳಿದ್ದರು.



ರಾಜೀನಾಮೆ ನೀಡಿದ ಶಾಸಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಸ್ಥಾನ ತೆರವಾಗುವ ಪ್ರತಿಯೊಂದು ಸಂದರ್ಭವೂ ಭ್ರಷ್ಟಾಚಾರ ಅಥವಾ ಇತರ ಯಾವುದೇ ದುಷ್ಕೃತ್ಯದಿಂದಲೇ ಉಂಟಾಗುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ, ಸದಸ್ಯರು ಮತ್ತೊಂದು ಪಕ್ಷವನ್ನು ಸೇರುವ ಮುನ್ನವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು; ಹೀಗಾಗಿ, ಈ ಕ್ರಮವನ್ನು ದುರುದ್ದೇಶಪೂರಿತ ಎಂದು ಹೇಳಲಾಗುವುದಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಸದಸ್ಯರೊಬ್ಬರಿಗೆ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡುವ ಹಕ್ಕಿರುವುದರಿಂದ, ಇದು ಭಿನ್ನಮತ ಮತ್ತು ಪ್ರಜಾಪ್ರಭುತ್ವವನ್ನು ವ್ಯಕ್ತಪಡಿಸುವ ಸ್ಪಷ್ಟ ವಿಧಾನವಾಗಿದೆ ಎಂದೂ ಪ್ರತಿಪಾದಿಸಿದ್ದರು.

