ಮಂಗಳೂರು : ಮಂಗಳೂರನ್ನು ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಬೇರ್ಪಡಿಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರತ್ಯೇಕ ‘ಮಂಗಳೂರು ರೈಲ್ವೆ ವಿಭಾಗ’ ರಚಿಸುವ ಬದಲು ಮಂಗಳೂರು ಪ್ರದೇಶದ ರೈಲ್ವೆ ಮಾರ್ಗಗಳನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇದು ತುಳುನಾಡಿನ ಜನರ ಆಶಯಕ್ಕೆ ಮಾಡಿದ ಮಹಾ ದ್ರೋಹ. ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಭಾಗಗಳ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿಯ ನೈಸರ್ಗಿಕ ಕೇಂದ್ರವಾಗಿದೆ. ಈ ಪ್ರದೇಶದ ರೈಲ್ವೆ ಜಾಲವು ವರ್ಷಕ್ಕೆ ₹1,100 ಕೋಟಿಗೂ ಅಧಿಕ ಆದಾಯ ನೀಡುತ್ತದೆ. ಕೊಂಕಣ ರೈಲ್ವೆಯ ಸುಮಾರು 750 ಕಿ.ಮೀ. ಮಾರ್ಗ, ಮಂಗಳೂರು–ಹಾಸನ ರೈಲು ಮಾರ್ಗ, ಎನ್ಎಂಪಿಟಿ ಬಂದರಿನ ಸಂಪರ್ಕ ಹಾಗೂ ಕಂಕನಾಡಿ, ತೊಕ್ಕೊಟ್ಟು, ಪಣಂಬೂರು, ಕುಳಶೇಖರ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳು ಈ ಪ್ರದೇಶದ ಆರ್ಥಿಕ ಸಾಮರ್ಥ್ಯವನ್ನು ತೋರಿಸುತ್ತವೆ.
ಮಂಗಳೂರು ಸೆಂಟ್ರಲ್ ಮತ್ತು ಕಂಕನಾಡಿ (ಮಂಗಳೂರು ಜಂಕ್ಷನ್) ಸೇರಿದಂತೆ ಐತಿಹಾಸಿಕ ಮಹತ್ವದ ಪ್ರಮುಖ ಟರ್ಮಿನಲ್ಗಳು ಇಲ್ಲಿವೆ. ಪ್ರತ್ಯೇಕ ವಿಭಾಗ ರಚಿಸಲು ಅಗತ್ಯವಾದ ಮೂಲಸೌಕರ್ಯ ಮತ್ತು ಆದಾಯ ಸಾಮರ್ಥ್ಯ ಮಂಗಳೂರಿಗೇ ಇದೆ. ಹೀಗಿರುವಾಗ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಅಗತ್ಯವೇನು? ಮೈಸೂರಿನ ಜನತೆ ಎಂದಿಗೂ ಈ ಕುರಿತು ಬೇಡಿಕೆ ಸಲ್ಲಿಸಿಲ್ಲ; ಅವರ ಒತ್ತಾಸೆಯೂ ಇರಲಿಲ್ಲ. ಆದರೆ, ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗಕ್ಕಾಗಿ ಕರಾವಳಿಯ ಜನರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈಲು ತಡೆ, ಉಪವಾಸ ಸತ್ಯಾಗ್ರಹ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ ಅನೇಕರು ಪ್ರಕರಣಗಳನ್ನು ಎದುರಿಸಿದ್ದಾರೆ. ದಿವಂಗತ ಆಸ್ಕರ್ ಫರ್ನಾಂಡಿಸ್ ಅವರು ಪ್ರತ್ಯೇಕ ವಿಭಾಗಕ್ಕಾಗಿ ಸಮಗ್ರ ಯೋಜನೆ ಮತ್ತು ರೂಪುರೇಷೆಯನ್ನು ಸಿದ್ಧಪಡಿಸಿದ್ದರು. ವಿಜಯಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳ ವಿಲೀನದ ಮೂಲಕ ಕರಾವಳಿಯ ಆರ್ಥಿಕ ಅಸ್ತಿತ್ವಕ್ಕೆ ಧಕ್ಕೆಯಾದಂತೆ, ಈಗ ಮಂಗಳೂರಿನ ರೈಲ್ವೆ ವಿಭಾಗದ ಹಕ್ಕನ್ನೂ ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರದ ಜನರ ಹಕ್ಕಿನ ಪ್ರಶ್ನೆಯಾಗಿದೆ. ಇದು ನಮ್ಮ ಪ್ರದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ತ್ಯೇಕ ವಿಭಾಗ ಸ್ಥಾಪನೆಯಾದರೆ ಸ್ಥಳೀಯ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇತ್ತು. ಆದರೆ ಈಗ ಉದ್ಯೋಗಕ್ಕಾಗಿ ಯುವಕರು ಬೆಂಗಳೂರು ಮತ್ತು ಮುಂಬೈ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಈ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಲಾಗುವುದು. ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. 2029ರಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸುವುದು ನಮ್ಮ ಬದ್ಧತೆ.