Connect with us

ಇತರ

ಮಂಗಳೂರು ಕಂಬಳದಲ್ಲಿ ಗುಣಪಾಲ ಕಡಂಬ ರಿಗೆ ನಿಂದನೆ: ಕಂಬಲಾಭಿಮಾನಿಗಳಿಂದ ಎಲ್ಲೆಡೆ ಆಕ್ರೋಶ, ಸಂಘಟಕರು ಮತ್ತು ಕಂಬಳ ಶಿಸ್ತು ಸಮಿತಿ ಮೌನ ಪ್ರತಿಭಟನೆ ಎಚ್ಚರಿಕೆ

Published

on

ಮಂಗಳೂರು : ಕಂಬಳದ ಬೀಷ್ಮ ಎಂದೇ ಖ್ಯಾತರಾಗಿರುವ ಕಂಬಳದ ಹಿರಿಯ ತೀರ್ಪುಗಾರ ಕಾರ್ಕಳದ ಗುಣಪಾಲ ಕಡಂಬ ಅವರಿಗೆ ಕಳೆದ ಶನಿವಾರ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ವ್ಯಕ್ತಿಯೋರ್ವರು ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ಇದೀಗ ಈ ಘಟನೆ ಕಂಬಳ ಕ್ಷೇತ್ರ ಮಾತ್ರವಲ್ಲದೇ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

ಘಟನೆಯ ವಿವರ
ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರು ಎಂದಿನಂತೆ ಮಂಗಳೂರು ಕಂಬಳದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರಾತ್ರಿ 11.45ರ ಸುಮಾರಿಗೆ ಅರುಣ್ ಶೆಟ್ಟಿ ಬಜ್ಪೆ ಎಂಬಾತ ವಿವರಣಾ ಕೌಂಟರ್‌ಗೆ ನುಗ್ಗಿ ಮೈಕ್ ಪಡೆದು ಕಡಂಬರತ್ತ ನೋಡಿ “ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು” (ಈ ಒಂತೆ ಮನಿಪಂದೆ ಕುಲ್ವನಾ, ಮುಲ್ಪ ಎರು ಬುಡ್ಯೆರೆ ಉಂಡು, ಯಾನ್ ಅರುಣ್ ಶೆಟ್ಟಿ ಪಾತೆರುನಿ) ಎಂದು ಏಕವಚನದಲ್ಲಿ ಗರ್ವದಿಂದ ಹೇಳಿದ್ದಾಗಿ ವರದಿಯಾಗಿದೆ. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಕಡಂಬ ಅವರು, “ನಾವು ಮೈಕ್ ಬಂದ್ ಮಾಡಿ ಕೂರುತ್ತೇವೆ, ನೀವು ಯಾವಾಗ ಬೇಕಾದರೂ ಕೋಣ ಬಿಡಿ” (ಎಂಕ್ಲು ಮೈಕ್ ಬಂದ್ ಮಲ್ತ್‌ದ್ ಕುಲ್ಲುವ, ನಿಕ್ಲ್ ಏಪ ಬೋಡಾಂಡಲ ಎರು ಬುಡ್ಲೆ) ಎಂದು ತಿರುಗೇಟು ನೀಡಿದ್ದಾರೆ.

ಅರುಣ್ ಶೆಟ್ಟಿ ಈ ರೀತಿ ಅವಮಾನ ಮಾಡಿರುವುದು ಒಂದು ಕಡೆಯಾದರೆ ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ನಿಂದನೆ ಮಾಡಿದ್ದಾರೆ ಎಂದು ಸಹ ವರದಿಯಾಗಿದೆ. ಕೋಣಗಳು ಓಡಿ ರೇಸ್ ಪೂರ್ಣಗೊಳಿಸುವ ಮಂಜೊಟ್ಟಿ ಬಳಿ ಇರುವ ತೀರ್ಪುಗಾರರ ಕೌಂಟರ್‌ನಲ್ಲಿ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪವೂ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ.

ಆಕ್ರೋಶ – ಅಭಿಮಾನಿ ಬಳಗ ರಚನೆ
ಕಂಬಳ ಕ್ರೀಡಾಕೂಟಕ್ಕೆ ಒಂದು ಶಿಸ್ತಿನ ಚೌಕಟ್ಟನ್ನು ತಂದು, ಇದೊಂದು ಅಥ್ಲೆಟಿಕ್ ಕ್ರೀಡೆ ಎನ್ನುವಷ್ಟರ ಮಟ್ಟಿಗೆ ದಶಕಗಳ ಕಾಲ ಬೆವರು ಹರಿಸಿ ಪ್ರತಿಫಲಾಪೇಕ್ಷೆ ಇಲ್ಲದೇ ಸುಮಾರು 60 ವರ್ಷಗಳಿಂದ ಕಂಬಳದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಕಂಬಳದ ಭೀಷ್ಮ ಎಂದೇ ಖ್ಯಾತಿಯನ್ನು ಪಡೆದಿರುವ ಗುಣಪಾಲ ಕಡಂಬ ಅವರಿಗೆ ಆದ ಈ ಅವಮಾನವನ್ನು ಕಂಬಳಾಭಿಮಾನಿಗಳು ಖಂಡಿಸಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಂಬ ಅವರ ಪರವಾಗಿ ಧ್ವನಿ ಎತ್ತಲು ‘ಗುಣಪಾಲ ಕಡಂಬ ಅಭಿಮಾನಿ ಬಳಗ’ದ ಹೆಸರಿನಲ್ಲಿ ವ್ಯಾಟ್ಸ್ಯಾಪ್‌ ಗ್ರೂಪ್‌ಗಳು ರಚನೆಯಾಗಿದ್ದು, ಸಾವಿರಾರು ಮಂದಿ ಒಂದಾಗಿದ್ದಾರೆ. ಅರುಣ್ ಶೆಟ್ಟಿ, ಲೋಕೇಶ್‌ ಶೆಟ್ಟಿ ಮುಚ್ಚೂರು ಮತ್ತು ಕಂಬಳ ಆಯೋಜಕರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಕಡಂಬರ ಅಭಿಮಾನಿ ಬಳಗ ನೀಡಿದ್ದಾರೆ.

ಸಂಘಟಕರು ಮತ್ತು ಶಿಸ್ತು ಸಮಿತಿಯ ಮೌನ
ಇಷ್ಟೆಲ್ಲಾ ನಡೆದರೂ ಕಂಬಳ ಶಿಸ್ತು ಸಮಿತಿ ಮತ್ತು ತೀರ್ಪುಗಾರರ ಸಮಿತಿ ಮೌನಕ್ಕೆ ಶರಣಾಗಿರುವುದು ಅಭಿಮಾನಿಗಳ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಶಿಸ್ತು ಉಲ್ಲಂಘನೆಯಾದಾಗ ಕ್ರಮ ಕೈಗೊಳ್ಳಬೇಕಾದ ಸಮಿತಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement