Published
4 weeks agoon
By
Akkare News
ಬೆಂಗಳೂರು: ವಿದ್ಯುತ್ ಮೀಟರ್ ಸಂಪರ್ಕ ಮರುಚಾಲನೆ ಮಾಡಲು ಮತ್ತು ನೂತನ ಸಂಪರ್ಕ ನೀಡಲು 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಬೆಸ್ಕಾಂನ ಇಂದಿರಾ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ರಾಜೇಶ್ ಕೆ.ವಿ. ಬಂಧಿತ ಆರೋಪಿ.


ವಿದ್ಯುತ್ ಗುತ್ತಿಗೆದಾರ ದಿಲೀಪ್.ಎಸ್.ಎನ್ ಅವರು ಇಂದಿರಾನಗರ ಬೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡವೊಂದಕ್ಕೆ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದಾರೆ. ಆ ಕಟ್ಟಡಕ್ಕೆ 24 ಕಿಲೋವಾಟ್ ಸಾಮರ್ಥ್ಯದ ನೂತನ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ರಾಜೇಶ್ ಕೆ.ವಿ ಅವರು 7 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟು, 3 ಲಕ್ಷಕ್ಕೆ ಒಪ್ಪಿಕೊಂಡಿದ್ದರು.

ಈ ಬಗ್ಗೆ ದಿಲೀಪ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಸ್.ಬಿ.ಪಾಟೀಲ್, ಕೇಶವಮೂರ್ತಿ ಮತ್ತು ರಾಜಶೇಖರಯ್ಯ ಅವರ ತಂಡವು ಕಾರ್ಯಾಚರಣೆ ರೂಪಿಸಿತ್ತು. ಅದರಂತೆ ದಿಲೀಪ್ ಅವರು ಸೋಮವಾರ, ರಾಜೇಶ್ ಅವರಿಗೆ 3 ಲಕ್ಷ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ. ಲಂಚದ ಹಣ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.






