Published
2 months agoon
By
Akkare News
ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬರೋಬ್ಬರಿ 4,500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ನನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ತನಿಖೆಯ ವೇಳೆ ವಂಚನೆ ನಡೆದಿರುವುದು ಸಾಕ್ಷ್ಯ ಸಮೇತ ಸಾಬೀತಾಗಿದೆ. ಈ ಕುರಿತು ಬೆಳಗಾವಿಯಲ್ಲಿ ಮಹತ್ವದ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ಪ್ರಕರಣದ ಸ್ಫೋಟಕ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ದಾಳಿ ನಡೆದು, ಎಫ್ಐಆರ್ ದಾಖಲಾದ ಬಳಿಕವೂ ಸಾರ್ವಜನಿಕರು ಶಿವಂ ಅಸೋಸಿಯೇಟ್ಸ್ಗೆ ಮತ್ತೇ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಹಾಗಾಗಿ, ಇನ್ಮುಂದೆಯಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿ ಮತ್ತು ಇಂತಹ ವಂಚನೆಗೆ ಬಲಿಬೀಳದಿರಲಿ ಎಂಬ ಕಾರಣಕ್ಕೆ ಸಿಐಡಿ ಈ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. 


ಮಹಾರಾಷ್ಟ್ರ ಲಿಂಕ್ ಹಾಗೂ ಹಣ ಮರುಪಾವತಿ ಹೇಗೆ?: ಈ ವಂಚನೆಯ ಜಾಲ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಹರಡಿದ್ದು, ಅಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಕಂಪನಿ ಸಂಪೂರ್ಣವಾಗಿ ಮುಳುಗುವ ಮುನ್ನವೇ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಹೂಡಿಕೆದಾರರಿಗೆ ನಿಯಮಬಾಹಿರವಾಗಿ ಹೋಗಿರುವ 400 ಕೋಟಿ ರೂ. ಹೆಚ್ಚುವರಿ ಹಣವನ್ನು ವಾಪಸ್ ಪಡೆದು ಬಾಕಿ ಉಳಿದಿರುವ ಹೂಡಿಕೆದಾರರಿಗೆ ಹಂಚಲು ಸಿಐಡಿ ನಿರ್ಧರಿಸಿದೆ. ಸದ್ಯ ರಿಕವರಿ ಮಾಡಲಾಗುವ ಹಣವನ್ನು ‘ಬಡ್ಸ್’ (BUDS) ಕಾಯ್ದೆ ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ತದನಂತರ ಅವರು ಕಾನೂನು ಪ್ರಕ್ರಿಯೆಗಳ ಮೂಲಕ ಸಾರ್ವಜನಿಕರಿಗೆ ಹಣವನ್ನು ವಾಪಸ್ ಮಾಡಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.



