Published
3 hours agoon
By
Akkare News
ಆರೋಪಿ ಜಯಚಂದ್ರ ಜೂ.22ರ ಸೋಮವಾರದಿಂದ ಕೇಂದ್ರಸ್ಥಾನದಲ್ಲಿ ಇರದೆ ಅನಧಿಕೃತ ಗೈರು ಆಗಿರುವ ಕುರಿತು ಕಂದಾಯ ನಿರೀಕ್ಷಕ ಚಂದ್ರನಾಯ್ಕ ಅವರು ಪುತ್ತೂರು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ.
ಪುತ್ತೂರು:ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿಯಲ್ಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮದ್ದೂರಿನ ಭಾರತೀನಗರ ಸಮೀಪ ಶೆಟ್ಟಿ ಹಳ್ಳಿಯ ಗಣೇಶ್ (೪೧ವ.)ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪದಲ್ಲಿ, ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿಯಾಗಿದ್ದ ಮಂಡ್ಯ ಮದ್ದೂರು ತಾಲೂಕು ಶೆಟ್ಟಹಳ್ಳಿ ಗ್ರಾಮದ ನಿವಾಸಿ ಜಯಚಂದ್ರ ಎಂಬಾತನ ಮೇಲೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಘಟನೆ ಬಳಿಕ ಆರೋಪಿ ಜಯಚಂದ್ರ ತಲೆಮರೆಸಿಕೊಂಡಿದ್ದ.
ಮಂಡ್ಯದ ಎಸ್.ಪಿ ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅನಿಲ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗಣೇಶ್ ಅವರ ಸಾವಿನ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಜಯಚಂದ್ರ, ಈ ಹಿಂದೆ ತಾನು ಕರ್ತವ್ಯ ನಿರ್ವಹಿಸಿದ್ದ ಬೆಳ್ತಂಗಡಿಯಲ್ಲಿ ರೂಮ್ ಒಂದನ್ನು ಬಾಡಿಗೆಗೆ ಪಡೆದು ತಂಗಿದ್ದ.ಈ ಮಾಹಿತಿಯರಿತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಜೂ.೨೫ರಂದು ಬೆಳಿಗ್ಗೆ ಭಾರತಿನಿಗರ ಶೆಟ್ಟಿಹಳ್ಳಿ ಘಟನಾಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಸುಳ್ಯದಲ್ಲೂ ಪ್ರಕರಣ: ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಾನಮತ್ತನಾಗಿ ಜೊತೆಗಿದ್ದಾತನಿಗೆ ಜಾತಿ ನಿಂದನೆ ಮಾಡಿ,ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಆತನ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿತ್ತು ಎಂದು ಬೆಳ್ತಂಗಡಿ ಸಿಐ ರವಿ ಬಿ.ಎಸ್.ಮಾಹಿತಿ ನೀಡಿದ್ದಾರೆ.


