Published
8 hours agoon
By
Akkare News
ಮಂಗಳೂರು: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಸಿಯೇಷನ್ (ಕೆ.ಎಸ್.ಸಿ.ಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಪದಾಧಿಕಾರಿಗಳ ಜತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸೋಮವಾರ ಮಹತ್ವದ ಚರ್ಚೆ ನಡೆಸಿದರು.
ವೆಂಕಟೇಶ್ ಪ್ರಸಾದ್ ಅವರು ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸಕ್ತರಾಗಿದ್ದು, ಸೂಕ್ತ ಸ್ಥಳ ನಿಗದಿಪಡಿಸಲು ಅತಿ ಶೀಘ್ರ ಮಂಗಳೂರಿಗೆ ಭೇಟಿ ನೀಡುವ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಯೋಜನೆ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. 
ಕ್ರಿಕೆಟ್ ಕ್ರೀಡಾಂಗಣಕ್ಕೆ ಎರಡು ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸ್ಥಳ ಪರಿಶೀಲನೆಗೆ ಆಗಮಿಸುವಂತೆ ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮನವಿ ಮಾಡಿದರು. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಗೊಂಡರೆ ಕರಾವಳಿ ಭಾಗದ ಕ್ರೀಡಾಪಟುಗಳಿಗೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ನಗರದ ಕ್ರೀಡಾ ಮೂಲಸೌಕರ್ಯಕ್ಕೆ ಹಾಗೂ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು. 


